ವಾಕಿಂಗ್​ಗೆ ಹೊರಟಿದ್ದ ತಂದೆಯನ್ನೇ ತಲ್ವಾರ್​ನಿಂದ ಕತ್ತರಿಸಿದ ಮಗ!

murder
Published on

ಬೆಳ್ತಂಗಡಿ: ವಾಕಿಂಗ್​ ಹೋಗುತ್ತಿದ್ದ ವ್ಯಕ್ತಿಯನ್ನು ಬೆಳ್ಳಂಬೆಳಗ್ಗೆ ಆತನ ಮನೆ ಸಮೀಪದಲ್ಲೇ ಹಿಂದಿನಿಂದ ಬಂದ ದುಷ್ಕರ್ಮಿ ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ವಾಸು ಸಫಲ್ಯ(66) ಮೃತರು. ಇವರು ಎಂದಿನಂತೆ ಸೋಮವಾರ ಬೆಳಗ್ಗೆ ಸಮೀಪದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನಕ್ಕೆ ವಾಕಿಂಗ್​ಗೆಂದು ಹೋಗುತ್ತಿದ್ದರು. ಹಿಂದಿನಿಂದ ಬಂದ ದುಷ್ಕರ್ಮಿ ವಾಸು ಸಫಲ್ಯ ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವಾಸು ಅವರನ್ನು ಸ್ಥಳೀಯರು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರಾದರೂ ಬದುಕಲಿಲ್ಲ. ಹಣಕ್ಕಾಗಿ ಪೀಡಿಸುತ್ತಿದ್ದ ಮಗ ದಯಾನಂದನೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿರಿ ದೇವರಿಗೆ ಕೈಮುಗಿಯುತ್ತಿದ್ದಾಗಲೇ ವ್ಯಕ್ತಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ!

ವಾಸು ಸಫಲ್ಯ ಅವರು ಕಾರು ಚಾಲಕರಾಗಿದ್ದರು. ಇವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಪುತ್ರ ದಯಾನಂದ ದುಶ್ಚಟ ಹೊಂದಿಲ್ಲದಿದ್ದರೂ, ಐಷಾರಾಮಿ ಜೀವನ ನಡೆಸುತ್ತಿದ್ದ. ಇತ್ತೀಚೆಗೆ ಕೆಲಸವಿಲ್ಲದೆ ಮನೆಯಲ್ಲೇ ಇದ್ದು ತಂದೆಯೊಂದಿಗೆ ಹಣಕ್ಕಾಗಿ ಜಗಳವಾಡುತ್ತಿದ್ದ. ಒಂದೆರಡು ಬಾರಿ ಈ ವಿಷಯ ಠಾಣೆ ಮೆಟ್ಟಿಲೇರಿದ್ದು, ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ದಯಾನಂದ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತಂದೆಯನ್ನು ಕೊಲ್ಲಲು ಸ್ಕೆಚ್​ ಹಾಕಿದ್ದ ಮಗ ದಯಾನಂದನಿಗೆ ಇನ್ನಿಬ್ಬರು ಸಹಕಾರ ನೀಡಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಮನೆಯಲ್ಲಿ ಜಗಳವಾದ ಸಂದರ್ಭದಲ್ಲಿ, ಮಗನೇ ತಂದೆಯನ್ನು ಕೊಲೆ ಮಾಡಿದ ಘಟನೆಗಳು ನಡೆಯುತ್ತಿವೆ ಎಂದು ಆತ ಒಮ್ಮೆ ಹೇಳಿದ್ದನಂತೆ. ಕೃತ್ಯ ನಡೆದ ಸ್ಥಳದಲ್ಲೇ ತಲವಾರನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳವನ್ನು ಸರ್ಕಲ್​ ಇನ್​ಸ್ಪೆಕ್ಟರ್​ ಸಂದೇಶ್​ ಪಿ.ಜಿ, ಎಸ್​ಐ ನಂದಕುಮಾರ್​ ಪರಿಶೀಲಿಸಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net