ಡಿಜೆ ಹಳ್ಳಿ ಗಲಭೆ; ಸಿಸಿಬಿ ಬಂಧಿತ ಸಯ್ಯದ್ ಸಮಿಯುದ್ದೀನ್ ಮಿಸ್ಸಿಂಗ್​... ಹುಡುಕಿಕೊಡಿ!

dj halli samiyuddin
Published on

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ ಭೈರಸಂದ್ರ ಗಲಭೆ ಪ್ರಕರಣ ಸಂಬಂಧ ಆರೋಪಿ ಸಮಿಯುದ್ದೀನ್​ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಇತ್ತ ಸಮಿಯುದ್ದೀನ್​ ಪತ್ನಿ, ನನ್ನ ಗಂಡ ನಾಪತ್ತೆ ಆಗಿದ್ದಾನೆ ಎಂದು ಎಂದು ಹೈಡ್ರಾಮ ಶುರು ಮಾಡಿದ್ದಾಳೆ.

ಗುರುವಾರ ಸುದ್ದಿಗೋಷ್ಠಿ ನಡೆಸಿದ ಸೈಯದ್​ ಸಮಿಯುದ್ದೀನ್​ ಪತ್ನಿ ಮತ್ತು ನಾರಿ ಫೌಂಡೇಷನ್​ ಅಧ್ಯಕ್ಷೆ ಪಾತೀಮಾ ತಬಸೂಮ್​, 'ಎರಡು ವರ್ಷಗಳ ಹಿಂದೆ ಸಮಿಯುದ್ದೀನ್​ ಜತೆ ಮದುವೆ ಆಗಿ ಎಚ್​ಬಿಆರ್​ ಲೇಔಟ್​ನಲ್ಲಿ ನೆಲೆಸಿದ್ದವು. ಗಲಭೆ ನಂತರ ಸಿಸಿಬಿ ಪೊಲೀಸರು ನನ್ನ ಗಂಡನನ್ನು ಕರೆದುಕೊಂಡು ಹೋಗಿದ್ದರು. ವಾಪಸ್​ ಬಂದಿಲ್ಲ. ಬಂಧಿಸಿರುವ ಬಗ್ಗೆಯೂ ಪೊಲೀಸರು ತಿಳಿಸಿಲ್ಲ. ನನ್ನ ಗಂಡನ ಮೊಬೈಲ್​ ಸ್ವಿಚ್ಡ್ ಆಫ್​​ ಆಗಿದೆ. ಅವರನ್ನು ಹುಡುಕಿಕೊಡುವಂತೆ ದೂರು ನೀಡಿದ್ದೇನೆ. ಹೈಕೋರ್ಟ್​ಗೂ ಹೇಬಿಯಸ್​ ಕಾಪರ್ಸ್​​ ಅರ್ಜಿ ಸಲ್ಲಿಸಿದ್ದೇನೆ' ಎಂದರು.

ಸಮಿಯುದ್ದೀನ್​ ಪತ್ನಿ ಪಾತೀಮಾ ತಬಸೂಮ್​ರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಸಿಬಿ ಹಿರಿಯ ಅಧಿಕಾರಿಗಳು, 'ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಸಮಿಯುದ್ದೀನ್​ನನ್ನು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಕಸ್ಟಡಿಗೆ ಪಡೆಯಲಾಗಿದೆ. ಈತನ ಕುರಿತು ಉಗ್ರ ನಿಗ್ರಹ ಪಡೆ(ಎಟಿಎಸ್​) ಎಸಿಪಿ ವೇಣುಗೋಪಾಲ್​ ನೇತೃತ್ವದ ತಂಡ ವಿಚಾರಣೆ ನಡೆಸುತ್ತಿದೆ' ಎಂದು ತಿಳಿಸಿದ್ದಾರೆ.

ಎಚ್​ಬಿಆರ್​ ಲೇಔಟ್​ನಲ್ಲಿ ಇರುವ ನಾರಿ ಫೌಂಡೇಷನ್​ಗೂ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ವಿದೇಶಿ ದೇಣಿಗೆ ಅಥವಾ ಸರ್ಕಾರದ ಅನುದಾನ ಪಡೆಯುತ್ತಿಲ್ಲ ಎಂದು ನಾರಿ ಫೌಂಡೇಷನ್​ ಅಧ್ಯಕ್ಷೆ ಫಾತೀಮಾ ತಬಸೂಮ್​ ಸಮಥಿರ್ಸಿಕೊಂಡಿದ್ದಾರೆ.

ಸಮಿಯುದ್ದೀನ್​ಗೆ ಶಂಕಿತ ಉಗ್ರರ ಜತೆ ಸಂಪರ್ಕವಿದೆ. ಆತನ ಪತ್ನಿ ಎನ್​ಜಿಒ ನಡೆಯುತ್ತಿದ್ದಾರೆ. ಇದಕ್ಕೆ ವಿದೇಶಿ ದೇಣಿಗೆ ಬರುತ್ತಿರುವುದಾಗಿ ಆರೋಪ ಕೇಳಿಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net