ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ... ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

Akhanda
Published on

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ಭೈರಸಂದ್ರ ಗಲಭೆಯಲ್ಲಿ ಮನೆ ಕಳೆದುಕೊಂಡ ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ ಕಾಂಗ್ರೆಸ್​ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ದಿಗ್ವಿಜಯ ಸುದ್ದಿ ವಾಹಿನಿ ಜತೆ ಮಾತನಾಡಿದ ಕಾಂಗ್ರೆಸ್​ ಶಾಸಕ ಅಖಂಡ ಶ್ರೀನಿವಾಸ್​, ಕಿಡಿಗೇಡಿಗಳು ನನ್ನ ಮನೆಗೆ ಬೆಂಕಿ ಇಟ್ಟರು. ಗಲಭೆ ನಡೆದು

ಇಷ್ಟುದಿನವಾದರೂ ಕೆಪಿಸಿಸಿ ಅಧ್ಯಕ್ಷರು ನನ್ನ ಮನೆಗೆ ಭೇಟಿ ನೀಡಿಲ್ಲ. ಕಾಂಗ್ರೆಸ್​ನವರು ನನ್ನ ನೆರವಿಗೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸುಟ್ಟು ಹೋಗಿರುವುದು ನಾನು ಬಾಳಿ ಬದುಕಿದ ಮನೆ, ಡಿ.ಕೆ.ಶಿವಕುಮಾರ್​ ಅವರ ಮನೆ ಸುಟ್ಟಿಲ್ಲ. ಅವರು ನನ್ನ ಮನೆಯನ್ನು ಬಂದು ನೋಡಲಿ, ಆಮೇಲೆ ಮಾತನಾಡಲಿ ಎಂದು ಅಸಮಾಧಾನ ಹೊರಹಾಕಿದರು. ನನ್ನ ಪರವಾಗಿ ಮಾತನಾಡಿದ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ನಾನು ಯಾರ ಜತೆಗೂ ದ್ವೇಷ ಸಾಧಿಸಿಲ್ಲ, ಎಲ್ಲರ ಜತೆಗೂ ಸಾಮರಸ್ಯದಿಂದ ಇದ್ದೆ. ಯಾರು ದಾಳಿ ಮಾಡಿದ್ದಾರೋ ಅವರ ಮೇಲೆ ಪೋಲಿಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಖಂಡ ಶ್ರೀನಿವಾಸ್​ ಮೂರ್ತಿ ಹೇಳಿದರು.

ಗಲಭೆ ಸಂಬಂಧ ಇಂತದ್ದೇ ಹೇಳಿಕೆ ಕೊಡುವಂತೆ ಅಖಂಡ ಶ್ರೀನಿವಾಸ ಮೂರ್ತಿ ಮೇಲೆ ಸರ್ಕಾರ ಒತ್ತಡ ಹಾಕುತ್ತಿದೆ ಎಂಬ ಡಿ.ಕೆ. ಶಿವಕುಮಾರ್​ ಹೇಳಿಕೆಯನ್ನು ತಳ್ಳಿ ಹಾಕಿದ ಶಾಸಕರು, ಸರ್ಕಾರ ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಹಾಕುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಡಿಜೆ ಹಳ್ಳಿ ಗಲಭೆ ಬಗ್ಗೆ ಇಂದು(ಶನಿವಾರ) ಬೆಳಗ್ಗೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್​, ಬಿಜೆಪಿಯೊಳಗೆ ಸಾಕಷ್ಟು ಆಂತರಿಕ ಕಚ್ಚಾಟ ಇದೆ. ಅವರ ಒಳ ತಂತ್ರದಿಂದಲೇ ಗಲಭೆ ನಡೆದಿದೆ ಎಂದು ಆರೋಪಿಸಿದ್ದರು. ಬಿಜೆಪಿಯವ್ರು ನಮ್ಮ ಕಾರ್ಪೋರೇಟರ್​ಗಳಿಗೆ ಪೊಲೀಸರಿಂದ ಹೆದರಿಸುತ್ತಿದ್ದಾರೆ. ಇದೇ ಹೇಳಿಕೆ ಕೊಡಬೇಕು ಎಂದು ಅಖಂಡ ಶ್ರೀನಿವಾಸ್​ ಮೂರ್ತಿ ಮೇಲೆ ಬಿಜೆಪಿ ಒತ್ತಡ ಹಾಕ್ತಿದೆ ಎಂದು ಹೊಸ ಬಾಂಬ್​ ಸಿಡಿಸಿದ್ದರು. ಇದರ ಬೆನ್ನಲ್ಲೇ ಡಿಕೆಶಿ ಹೇಳಿಕೆಯನ್ನು ಶಾಸಕರು ತಳ್ಳಿ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net