ದೇವರಿಗೆ ಕೈಮುಗಿಯುತ್ತಿದ್ದಾಗಲೇ ವ್ಯಕ್ತಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ!

murder
Published on

ರಾಯಚೂರು: ದೇವಸ್ಥಾನದ ಮುಂದೆ ನಿಂತು ದೇವರಿಗೆ ನಮಸ್ಕರಿಸುತ್ತಿದ್ದ ವೇಳೆಯೇ ಆತನನ್ನು ದುಷ್ಕರ್ಮಿಯೊಬ್ಬ ಕುಡುಗೋಲಿನಿಂದ ಕೊಚ್ಚಿ ಕೊಂದಿದ್ದಾನೆ. ಈ ಭೀಕರ ಘಟನೆಗೆ ತಾಲೂಕಿನ ಪುಚ್ಚಲದಿನ್ನಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಪುಚ್ಚಲದಿನ್ನಿಯ ನಂದಯ್ಯಸ್ವಾಮಿ (45) ಕೊಲೆಯಾದ ದುರ್ದೈವಿ. ಇಂದು(ಸೋಮವಾರ) ಬೆಳಗ್ಗೆ ಹುನುಮಾನ್​ ದೇವಾಸ್ಥಾನಕ್ಕೆ ಹೋಗಿದ್ದ ನಂದಯ್ಯ ಸ್ವಾಮಿ, ಪೂಜೆ ಮುಗಿಸಿ ಹೊರ ಬಂದ ಬಳಿಕ ದೇಗುಲ ಮುಂಭಾಗದಲ್ಲಿ ನಿಂತು ನಮಸ್ಕರಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಚನ್ನಬಸ್ಸಯ್ಯ ಸ್ವಾಮಿ ಎಂಬಾತ ಕುಡುಗೋಲಿನಿಂದ ನಂದಯ್ಯಸ್ವಾಮಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.

ದೇವರ ಸನ್ನಿಧಿ ಆವರಣದಲ್ಲೇ ನಡೆದ ಭೀಕರ ಕೊಲೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇಡಪನೂರು ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲೆಯಾದ ನಂದಯ್ಯ ಸ್ವಾಮಿ ಹಾಗೂ ಆರೋಪಿ ಚನ್ನಬಸ್ಸಯ್ಯ ಮನೆಗಳು ಅಕ್ಕಪಕ್ಕದಲ್ಲಿದ್ದು, ಎರಡೂ ಕುಟುಂಬಗಳು ಚೆನ್ನಾಗಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಚನ್ನಬಸ್ಸಯ್ಯ ಮಾನಸಿಕ ಅಸ್ವಸ್ಥನಾಗಿದ್ದು, ಈಗಾಗಲೇ ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net