ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!

accident
Published on

ನೆಲಮಂಗಲ: ಅಜ್ಜನ ಮನೆಯಲ್ಲಿದ್ದ 8 ವರ್ಷದ ಮಗನನ್ನು ನೋಡುವ ಆಸೆಗಣ್ಣಿನಲ್ಲಿ ಬರುತ್ತಿದ್ದ ಅಪ್ಪ-ಅಮ್ಮ ಇಬ್ಬರೂ ಮಾರ್ಗಮಧ್ಯೆ ದುರ್ಮರಣಕ್ಕೀಡಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಂಗಳವಾರ ಬೆಳಗ್ಗೆ ಬೈಕಿನಿಂದ ಬಿದ್ದ ದಂಪತಿ ಮೇಲೆ ಕಂಟೇನರ್​ ಲಾರಿ ಹರಿದು ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ನಗರೂರು ಗ್ರಾಮದ ನರಸಿಂಹಮೂರ್ತಿ(41) ಮತ್ತು ಇವರ ಪತ್ನಿ ಪುಷ್ಪಲತಾ (28) ಮೃತರು.

ಪುಷ್ಪಲತಾ ಅವರ ತವರು ಮನೆ ತುಮಕೂರು ತಾಲೂಕಿನ ವರದೇನಹಳ್ಳಿಯಲ್ಲಿದೆ. ನರಸಿಂಹಮೂರ್ತಿ ದಂಪತಿಯು ಮಗನನ್ನು ವರದೇನಹಳ್ಳಿಯಲ್ಲಿ ಅಜ್ಜನ ಮನೆಯಲ್ಲೇ ಬಿಟ್ಟಿದ್ದರು. ಮಗನನ್ನು ನೋಡಲೆಂದು ಮಂಗಳವಾರ ಬೆಳಗ್ಗೆ 8ರ ಸುಮಾರಿನಲ್ಲಿ ತೆರಳುತ್ತಿದ್ದಾಗ ಬೂದಿಹಾಳ್​ ಗೇಟ್​ ಬಳಿ ಅಪಘಾತ ಸಂಭವಿಸಿದೆ. ಬೈಕ್​ ನಿಯಂತ್ರಣ ತಪ್ಪಿದ್ದರಿಂದ ಗಂಡ-ಹೆಂಡತಿ ಇಬ್ಬರೂ ರಸ್ತೆಯ ಬಲಬದಿಗೆ ಬಿದ್ದಿದ್ದು, ಹಿಂದಿನಿಂದ ಬಂದ ಕಂಟೇನರ್​ ಇಬ್ಬರ ಮೇಲೆ ಹರಿದಿದೆ. ಸ್ಥಳದಲ್ಲೇ ಅಸುನೀಗಿದ್ದಾರೆ. ಸಂಚಾರ ಪೊಲೀಸರು ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಪಘಾತ ಹಿನ್ನೆಲೆಯಲ್ಲಿ ಬೂದಿಹಾಳ್​ ಗೇಟ್​ ಬಳಿ 1 ಗಂಟೆಗೂ ಹೆಚ್ಚು ಕಾಲ ವಾಹನದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಧಾವಿಸಿದ ಸಂಚಾರ ಪೊಲೀಸರು ಹಾಗೂ ಜಾಸ್​ಟೋಲ್​ ಸಿಬ್ಬಂದಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net