ಇಬ್ಬರು ವಿಷ ಕುಡಿದ್ರು... ಮೂವರು ಸೀಮೆಎಣ್ಣೆ ಕುಡಿದ್ರು... ಈ ಜಗಳದಲ್ಲಿ ಓರ್ವ ಮಹಿಳೆ ಸತ್ತೇ ಹೋದ್ಲು

Poison vvani
Published on

ಕೆ.ಎಂ.ದೊಡ್ಡಿ (ಮಂಡ್ಯ): ಕೊಕ್ಕರೆಬೆಳ್ಳೂರಿನಲ್ಲಿ ಮಂಗಳವಾರ ಜಮೀನು ವಿವಾದ ವಿಚಾರಕ್ಕೆ ಸೋದರ ಸಂಬಂಧಿಗಳ ಜಗಳ ತಾರಕಕ್ಕೇರಿದ್ದು, ಮನನೊಂದ ಎರಡು ಕುಟುಂಬಗಳ ಐವರು ಕ್ರಿಮಿನಾಶ ಮತ್ತು ಸೀಮೆಎಣ್ಣೆ ಕುಡಿದಿದ್ದಾರೆ. ಈ ಪೈಕಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದಾರೆ.

ಗ್ರಾಮದ ನಾರಾಯಣ ಮತ್ತು ಶ್ರೀನಿವಾಸ್​ ಕುಟುಂಬದವರು ಸೋದರ ಸಂಬಂಧಿಗಳಾಗಿದ್ದು, ಆಸ್ತಿ ವಿಚಾರಕ್ಕೆ ಮನಸ್ತಾಪ ಮಾಡಿಕೊಂಡಿದ್ದರು. ಹದಿನೈದು ದಿನಗಳ ಹಿಂದೆ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆದು ಹಿರಿಯರು ಬುದ್ಧಿವಾದ ಹೇಳಿದ್ದರು. ಆದರೆ ತೀರ್ಮಾನಕ್ಕೆ ಒಪ್ಪದ ಎರಡೂ ಕುಟುಂಬಗಳ ನಡುವೆ ಮಂಗಳವಾರ ಬೆಳಗ್ಗೆ ಜಗಳ ಆರಂಭವಾಗಿತ್ತು.

ಆಸ್ತಿ ವಿಚಾರವಾಗಿ ಮನನೊಂದ ನಾರಾಯಣ ಅವರ ಪತ್ನಿ ​ಶೈಲಜಾಲಕ್ಷ್ಮಮ್ಮ ಮತ್ತು ತಿಮ್ಮಮ್ಮ ಕೀಟನಾಶಕ ಸೇವಿಸಿದ್ದರು. ಇವರನ್ನು ತಕ್ಷಣ ಮದ್ದೂರು ಪಟ್ಟಣದ ಕೆ.ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಶೈಲಜಾಲಕ್ಷ್ಮಮ್ಮ(35) ಮೃತಪಟ್ಟಿದ್ದಾರೆ. ತೀವ್ರ ಅಸ್ವಸ್ಥರಾಗಿರುವ ತಿಮ್ಮಮ್ಮ(45) ಅವರನ್ನು ಮಂಡ್ಯದ ಖಾಸಗಿ ನರ್ಸಿಂಗ್​ ಹೋಂಗೆ ಸೇರಿಸಲಾಗಿದೆ.

ಮತ್ತೊಂದೆಡೆ ಶ್ರೀನಿವಾಸ್​ ಕುಟುಂಬದ ಜಯಮ್ಮ(62), ಸಿದ್ದೇಶ್​(41), ಶಿವಲಿಂಗಮ್ಮ(65) ಸಹ ಸೀಮೆಎಣ್ಣೆ ಕುಡಿದು ಅಸ್ವಸ್ಥರಾಗಿದ್ದು, ಎಲ್ಲರನ್ನೂ ಕೆ.ಗುರುಶಾಂತಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮಕ್ಕೆ ವೃತ್ತ ನಿರೀಕ್ಷಕ ಕೆ.ಆರ್​.ಪ್ರಸಾದ್​, ಎಸ್​ಐ ಮಂಜೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net