More

  ಭ್ರಷ್ಟರಿಗೆ ಕಾದಿದೆ ಜೈಲುವಾಸ, ಮೋದಿ ಗ್ಯಾರಂಟಿ

  ಇಸ್ಕಾನ್, ರಾಮಕೃಷ್ಣ ಮಿಷನ್, ಸೇವಾಶ್ರಮ ಸಂಘಗಳಿಗೆ ಟಿಎಂಸಿ ಬೆದರಿಕೆ ವಿರುದ್ಧ ಪ್ರಧಾನಿ ಕಿಡಿ

  ಒಂದೇ ದಿನದಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ರ‍್ಯಾಲಿ ನಡೆಸುವ ಸರಣಿಯನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್​ನಲ್ಲಿ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ವಿರುದ್ಧದ ವಾಕ್ ಪ್ರಹಾರವನ್ನು ಇನ್ನಷ್ಟು ತೀವ್ರಗೊಳಿಸಿದರು.

  ಕೋಲ್ಕತ: ಭ್ರಷ್ಟಾಚಾರದ ವಿಷಯದಲ್ಲಿ ಟಿಎಂಸಿ-ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಭ್ರಷ್ಟರ ವಿರುದ್ಧದ ಕ್ರಮ ತೀವ್ರಗೊಳ್ಳುತ್ತದೆ. ಜೂನ್ 4ರ ಬಳಿಕ ಭ್ರಷ್ಟರು ಜೈಲಿನಲ್ಲೇ ಜೀವನ ಕಳೆಯಬೇಕಾಗುತ್ತದೆ, ಭ್ರಷ್ಟರನ್ನು ಬಿಡುವುದೇ ಇಲ್ಲ, ಇದು ಮೋದಿ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

  ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಭಾನುವಾರ ಬಹಿರಂಗ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದಂತೆ ಐಎನ್​ಡಿಐಎ ಮೈತ್ರಿಕೂಟವನ್ನು ಗುರಿಯಾಗಿಸಿ ಪ್ರಧಾನಿ ಕಿಡಿಕಾರಿದರು. ಮತಬ್ಯಾಂಕ್ ಓಲೈಕೆಗಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಲ್ಲ ಮಿತಿಗಳನ್ನೂ ಮೀರಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

  ‘ಇಸ್ಕಾನ್, ರಾಮಕೃಷ್ಣ ಮಿಷನ್ ಹಾಗೂ ಭಾರತ ಸೇವಾಶ್ರಮ ಸಂಘಗಳು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಸಕ್ತಿಗಳಿಗೆ ಪರವಾಗಿ ಕೆಲಸ ಮಾಡುತ್ತಿವೆ’ ಎಂದು ಸಿಎಂ ಮಮತಾ ಬ್ಯಾನರ್ಜಿ ಹೂಗ್ಲಿಯ ಜೈರಂಬಾಟಿಯಲ್ಲಿ ಶನಿವಾರ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ವಾಗ್ದಾಳಿ ನಡೆಸಿದ ಮೋದಿ, ರಾಜ್ಯದಲ್ಲಿನ ವೋಟ್​ಬ್ಯಾಂಕ್ ಓಲೈಕೆಗಾಗಿ ಮಮತಾ ಬ್ಯಾನರ್ಜಿ ಈ ಥರದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಕ್​ಪ್ರಹಾರ ನಡೆಸಿದರು.

  ಮಮತಾ ಮಿತಿ ಮೀರಿದ್ದಾರೆ

  ಹಿಂಸೆಗೆ ಆದ್ಯತೆ ನೀಡುವ ಟಿಎಂಸಿ ಸರ್ಕಾರ ಈ ಚುನಾವಣೆಯಲ್ಲಿ ಬಂಗಾಳದ ಜನತೆಯನ್ನು ಹೆದರಿಸುತ್ತಿದೆ. ಈ ಸಲವಂತೂ ಮಮತಾ ಸರ್ಕಾರ ಎಲ್ಲ ಮಿತಿಗಳನ್ನೂ ಮೀರಿದೆ. ದೇಶ ಹಾಗೂ ವಿಶ್ವಾದ್ಯಂತ ಸೇವೆ ಮತ್ತು ನೈತಿಕತೆಗೆ ಹೆಸರಾಗಿರುವ ಇಸ್ಕಾನ್, ಭಾರತ ಸೇವಾಶ್ರಮ ಸಂಘ ಹಾಗೂ ಸ್ವಾಮಿ ವಿವೇಕಾನಂದರಿಂದ ಸ್ಥಾಪಿತ ರಾಮಕೃಷ್ಣ ಮಿಷನ್ ದೇಶದ ಹೆಮ್ಮೆ. ಆದರೆ ಬಂಗಾಳದ ಸಿಎಂ ಅವುಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ಬಂಗಾಳದ ಜನತೆ ಮತ ಚಲಾವಣೆ ಮೂಲಕ ಟಿಎಂಸಿ ಸರ್ಕಾರಕ್ಕೆ ಸರಿಯಾದ ಪಾಠ ಕಲಿಸಬೇಕು, ಆ ಮೂಲಕ ಭವಿಷ್ಯದಲ್ಲಿ ಇಂಥ ಸಾಮಾಜಿಕ-ಧಾರ್ವಿುಕ ಸಂಘಟನೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಲು ಟಿಎಂಸಿ ಧೈರ್ಯ ತೋರದಂತೆ ಮಾಡಬೇಕು ಎಂದು ಮೋದಿ ಕಿಡಿಕಾರಿದರು. ಬಿಷ್ಣುಪುರದಲ್ಲಿನ ಇನ್ನೊಂದು ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಮುಸ್ಲಿಮ್ ಮೂಲಭೂತವಾದಿಗಳ ಒತ್ತಡಕ್ಕೆ ಮಣಿದು ಮಮತಾ ಬ್ಯಾನರ್ಜಿ ಹಿಂದು ಸಂತ-ಸನ್ಯಾಸಿಗಳ ವಿರುದ್ಧ ಮಾತನಾಡುತ್ತಿದ್ದಾರೆ ಎಂದೂ ಆರೋಪಿಸಿದರು.

  ಷೇರು ಮಾರುಕಟ್ಟೆ ಹೊಸ ಎತ್ತರಕ್ಕೆ

  ಜೂನ್ 4ರ ನಂತರ ಷೇರು ಮಾರುಕಟ್ಟೆ ಹೊಸ ಎತ್ತರಕ್ಕೆ ತಲುಪಲಿದ್ದು, ಗೂಳಿ ಕುಣಿತಕ್ಕೆ ಷೇರು ಮಾರುಕಟ್ಟೆಯ ಪ್ರೋಗ್ರಾಮರ್ ಕೂಡ ಸುಸ್ತಾಗಲಿ ದ್ದಾರೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಕಳೆದ 10 ವರ್ಷಗಳ ಕಾಲಾವಧಿಯಲ್ಲಿ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ 25 ಸಾವಿರದಿಂದ 75 ಸಾವಿರ ಅಂಶಗಳವರೆಗೆ ಪಯಣಿಸಿದೆ. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಇದು ಮತ್ತಷ್ಟು ಏರುಮುಖ ಕಾಣಲಿದೆ ಎಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಕೆಲ ದಿನಗಳ ಹಿಂದೆ, ಷೇರು ಮಾರುಕಟ್ಟೆ ಜೂನ್ 4ರ ನಂತರ ಮತ್ತಷ್ಟು ಏರಿಕೆ ಕಾಣಲಿದೆ ಎಂದು ಹೇಳಿದ್ದರು.

  ಉದ್ಯಮಿಗಳಲ್ಲಿ ಭಯ ಹುಟ್ಟಿಸಿದ ಯುವರಾಜ

  ಮಾವೋವಾದಿ ಭಾಷೆ ಬಳಸುತ್ತಿರುವ ಯುವರಾಜನಿಂದಾಗಿ (ರಾಹುಲ್ ಗಾಂಧಿ) ಕೈಗಾರಿಕೋದ್ಯಮಿಗಳು ಯಾವುದೇ ರಾಜ್ಯದಲ್ಲಿ ಹೂಡಿಕೆ ಮಾಡುವ ಮೊದಲು 50 ಸಲ ಯೋಚನೆ ಮಾಡುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

  ಜಾರ್ಖಂಡ್​ನ ಜಮ್​ಶೇದ್​ಪುರದಲ್ಲಿನ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಮಾವೋವಾದಿಗಳ ಭಾಷೆ ಬಳಸುತ್ತಿರುವ ರಾಹುಲ್, ಹೊಸ ರೀತಿಯಲ್ಲಿ ಹಣ ಸುಲಿಗೆಗೆ ಇಳಿದಿದ್ದಾರೆ ಎಂದರು. ಕಾಂಗ್ರೆಸ್ ಹಾಗೂ ಐಎನ್​ಡಿಐಎ ಮೈತ್ರಿಕೂಟ ಸರ್ಕಾರಗಳ ಮುಖ್ಯಮಂತ್ರಿಗಳು ಯುವರಾಜನ ಈ ಮಾತುಗಳನ್ನು ಒಪು್ಪತ್ತಾರೋ ಇಲ್ಲವೋ ಎಂದು ಹೇಳುವ ಧೈರ್ಯ ತೋರಲಿ ಎಂದು ಸವಾಲೆಸೆದರು.

  ರಾಯ್ಬರೇಲಿಯಿಂದಲೂ ಕಣಕ್ಕಿಳಿದಿರುವ ರಾಹುಲ್ ಗಾಂಧಿ, ಕ್ಷೇತ್ರದಲ್ಲಿನ ಪ್ರಚಾರ ವೇಳೆ ‘ಇದು ನನ್ನ ಅಮ್ಮನ ಕ್ಷೇತ್ರ’ ಎಂದಿದ್ದನ್ನು ಉಲ್ಲೇಖಿಸಿದ ಪ್ರಧಾನಿ, 8 ವರ್ಷಗಳ ಶಾಲಾ ಬಾಲಕ ಕೂಡ ಇಂಥ ಮಾತು ಹೇಳುವುದಿಲ್ಲ ಎಂದರು. ಒಬ್ಬ 8 ವರ್ಷದ ಬಾಲಕ ತನ್ನ ತಂದೆ ಓದಿದ್ದ ಶಾಲೆಯಲ್ಲೇ ಓದುತ್ತಿದ್ದರೂ ಇದು ನನ್ನ ತಂದೆಯ ಶಾಲೆ ಎನ್ನುವುದಿಲ್ಲ. ಆದರೆ ಕುಟುಂಬ ಆಧಾರಿತ ಈ ಪಕ್ಷಗಳು ಸಂಸತ್ ಕ್ಷೇತ್ರಗಳನ್ನೇ ಉಯಿಲು ಬರೆಯುತ್ತಿವೆ, ಇಂಥ ಕುಟುಂಬಕೇಂದ್ರಿತ ಪಕ್ಷಗಳ ರಾಜಕಾರಣದಿಂದ ಜಾರ್ಖಂಡ್ ಜನರನ್ನು ರಕ್ಷಿಸಬೇಕಾಗಿದೆ ಎಂದ ಮೋದಿ, ‘ರಾಯ್ಬರೇಲಿ ಕ್ಷೇತ್ರ ಮಗನಿಗೆ ಅರ್ಪಿಸಿದ್ದೇನೆ’ ಎಂದು ಸೋನಿಯಾ ಹೇಳಿದ್ದನ್ನೂ ಉಲ್ಲೇಖಿಸಿ, ಅವರ ವಿರುದ್ಧವೂ ವಾಗ್ದಾಳಿ ನಡೆಸಿದರು.

  ಲೂಟಿಯಾದ ಹಣ ವಾಪಸ್

  ಜೆಎಂಎಂ, ಕಾಂಗ್ರೆಸ್, ಆರ್​ಜೆಡಿ ಪಕ್ಷಗಳು ಜಾರ್ಖಂಡ್ ರಾಜ್ಯವನ್ನು ಲೂಟಿ ಮಾಡುತ್ತಿವೆ. ನಾಯಕರು, ಅಧಿಕಾರಿಗಳ ಮನೆಯಲ್ಲಿ ನೋಟುಗಳ ಪರ್ವತವೇ ಸಿಗುತ್ತಿದೆ. ಜಾರ್ಖಂಡ್ ಹೆಸರು ಹೇಳಿದಾಗ ಖನಿಜ ಸಂಪತ್ತಿನಿಂದ ಕೂಡಿದ ರಾಜ್ಯ ನೆನಪಾಗುವ ಬದಲು ಲೂಟಿಯಾದ ನೋಟುಗಳ ಬೆಟ್ಟದ ಚಿತ್ರ ಕಾಣಿಸುತ್ತದೆ. ಅದು ಬಡವರು, ಆದಿವಾಸಿಗಳು, ದಲಿತರು, ಹಿಂದುಳಿದವರು ಮತ್ತು ನಿಮ್ಮ ಮಕ್ಕಳ ಹಣ. ಯಾರಿಂದ ಆ ಹಣ ಲೂಟಿ ಮಾಡಲಾಗಿದೆಯೋ ಅದನ್ನು ಅವರಿಗೇ ವಾಪಸ್ ಕೊಡುವುದು ತಮ್ಮ ಗ್ಯಾರಂಟಿ ಎಂದ ಮೋದಿ, ಅದಕ್ಕಾಗಿ ಸರ್ಕಾರ ಕಾನೂನು ಮಾರ್ಗಗಳನ್ನು ಅನ್ವೇಷಿಸುತ್ತಿದೆ ಎಂದರು.

  ದೊಡ್ಡ ದಾಖಲೆ ನಿರ್ಮಾಣ

  ‘ಜನರು ನಮ್ಮ ಸರ್ಕಾರದ ಮೇಲೆ ವಿಶ್ವಾಸ ಇರಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ದೊಡ್ಡ ದಾಖಲೆಯನ್ನು ನಿರ್ವಿುಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಮೋದಿ, ದೇಶದ ಜನರು ಕಳೆದ 10 ವರ್ಷಗಳ ಟ್ರಾ್ಯಕ್ ರೆಕಾರ್ಡ್ ನೋಡಿದ್ದಾರೆ. ನಮ್ಮ ದುಃಖಗಳ ಬಗ್ಗೆ, ನೋವುಗಳ ಬಗ್ಗೆ ಚಿಂತೆ ಮಾಡುವ ಸರ್ಕಾರವಿದೆ ಎಂದು ದೇಶಕ್ಕೆ ಮನವರಿಕೆಯಾಗಿದೆ. ಹಾಗಾಗಿ, ಈ ಬಾರಿ ಬಿಜೆಪಿ ಅಭೂತಪೂರ್ವ ಗೆಲುವನ್ನು ದಾಖಲಿಸಲಿದೆ ಎಂದರು. ಎನ್​ಡಿಎ 400 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದ್ದು, ಈ ಪೈಕಿ ಬಿಜೆಪಿ 370 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಪುನರುಚ್ಚರಿಸಿದ್ದಾರೆ.

  ಸ್ಕಾಚ್ ಗ್ರೂಪ್ ವರದಿ ಪ್ರಕಾರ ಕಳೆದ 10 ವರ್ಷಗಳಲ್ಲಿ ಪ್ರತಿ ವರ್ಷ ಸರಾಸರಿ 5 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ಇಪಿಎಫ್​ಒ ಅಂಕಿಅಂಶಗಳ ಪ್ರಕಾರ ಕಳೆದ 7 ವರ್ಷಗಳಲ್ಲಿ 6 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿಯಾಗಿವೆ. 1.25 ಲಕ್ಷ ನವೋದ್ಯಮ ಗಳು, 100 ಯೂನಿಕಾರ್ನ್ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ.

  | ನರೇಂದ್ರ ಮೋದಿ ಪ್ರಧಾನಿ

  ಆರ್​ಸಿಬಿ ಗೆಲುವಿಗೆ ಅಲ್ಲಿಂದಲೇ ಶುಭಕೋರಿದ ವಿಜಯ್​​ ಮಲ್ಯ! ದಯವಿಟ್ಟು ಫೈನಲ್​ಗಾದ್ರೂ ಭಾರತಕ್ಕೆ ಬನ್ನಿ…

  ರೈತರಿಗೆ ಶುಭಸುದ್ದಿ: ಅಂಡಮಾನ್​ಗೆ ಅಪ್ಪಳಿಸಿದ ನೈರುತ್ಯ ಮುಂಗಾರು! ಕೇರಳಕ್ಕೆ ಆಗಮನ ಯಾವಾಗ ಗೊತ್ತೇ..?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts