ಅಕ್ರಮ‌ ಗಣಿ ವಿರುದ್ಧ ಹೋರಾಟ: ಸಿದ್ದರಾಮಯ್ಯಗೆ ಆಹ್ವಾನ ನೀಡಿದ ಸುಮಲತಾ

sumalatha
Published on

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ಅಕ್ರಮ ಗಣಿಗಾರಿಕೆ ವಿಚಾರದಲ್ಲಿನ ಕದನ ಮತ್ತೊಂದು ಮಗ್ಗುಲಿಗೆ ಹೊರಳುವ ಲಕ್ಷಣ ಕಾಣಿಸಿದೆ.

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಂಡ್ಯಗೆ ಆಹ್ವಾನಿಸಿದ ಸುಮಲತಾ, ಹೋರಾಟಕ್ಕೆ ಬೆಂಬಲ ಕೋರಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ಎದುರು ಸಿಕ್ಕಾಗ ಸಿದ್ದರಾಮಯ್ಯಗೆ ಸುಮಲತಾ ಈ ಆಹ್ವಾನ ನೀಡಿದ್ದಾರೆ.

ಸುಮಲತಾ ಎದುರು ಸಿಕ್ಕಾಗ, 'ಏನಮ್ಮ ನಿಮ್ದು ಬಹಳ ಜೋರಾಗಿದೆ?' ಎನ್ನುತ್ತಾ ಸಿದ್ದರಾಮಯ್ಯ ನಕ್ಕರು. ನಗುತ್ತಲೇ ಪ್ರತಿಕ್ರಿಯಿಸಿದ ಸುಮಲತಾ, 'ಏನಿಲ್ಲ ಹಾಗೇ ಸ್ವಲ್ಪ ನಡೀತಿದೆ' ಎಂದರು. ಬಳಿಕ 'ಮಂಡ್ಯಕ್ಕೆ ನೀವು ಒಂದು ಬಾರಿ ಭೇಟಿ ಕೊಡಿ ಸರ್' ಎಂದು ಕೋರಿದರು. ಅವರ ಕೋರಿಕೆಗೆ, 'ಆಯ್ತು ಬರುತ್ತೇನೆ' ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ಸುಮಲತಾ ಸೆಟೆದು ನಿಂತಿರುವ ವಿಚಾರ ಇದೀಗ ರಾಜಕೀಯ ಕ್ಷೇತ್ರದಲ್ಲಿ ಬಹುಚರ್ಚಿತ ವಿಷಯ. ಭಾನುವಾರ ರಾಜಭವನದಲ್ಲಿ ರಾಜಕೀಯ ನಾಯಕರ ನಡುವೆ ಈ ವಿಷಯ ಚರ್ಚೆಯಾಗಿದೆ.

ಹಲವು ನಾಯಕರು ಸುಮಲತಾ ನಡೆಯನ್ನು ಸ್ವಾಗತಿಸಿದ್ದಾರೆ. ಮತ್ತೆ ಕೆಲವರು ಹೋರಾಟ ಮುಂದುವರಿಸುವಂತೆ ಸಲಹೆ ನೀಡಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net