ನವದೆಹಲಿ: ತನ್ನ ಯೂಟ್ಯೂಬ್ ಚಾನೆಲ್ ಮತ್ತು ಇನ್ಸ್ಟಾಗ್ರಾಂಗೆ ಹೈ ಕ್ವಾಲಿಟಿ ವಿಡಿಯೋ ಮಾಡಲು, ದುಬಾರಿ ಡಿಎಸ್ಎಲ್ಆರ್ ಕ್ಯಾಮೆರಾ ಖರೀದಿಸುವುದಕ್ಕಾಗಿ ಮಾಲೀಕರ ಮನೆಗೆ ಕನ್ನ ಹಾಕಿದ ಮನೆಗೆಲಸದಾಕೆಯನ್ನು ದೆಹಲಿ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
ಬಂಧಿತಳನ್ನು 30 ವರ್ಷದ ನೀತು ಯಾದವ್ ಎಂದು ಗುರುತಿಸಲಾಗಿದೆ. ಈ ಘಟನೆ ದೆಹಲಿಯ ದ್ವಾರಕ ಏರಿಯಾದಲ್ಲಿ ನಡೆದಿದೆ. ಆರೋಪಿ ನೀತು, ನಿಕೋನ್ ಡಿಎಸ್ಎಲ್ಆರ್ ಕ್ಯಾಮೆರಾ ಖರೀದಿ ಮಾಡಲು ಬಯಸಿದ್ದಳು. ಈ ಕ್ಯಾಮೆರಾದಲ್ಲಿ ಇನ್ಸ್ಟಾಗ್ರಾಂ ರೀಲ್ಸ್ ಮತ್ತು ಯೂಟ್ಯೂಬ್ ವಿಡಿಯೋ ಮಾಡಿದರೆ ಹೆಚ್ಚಿನ ಕ್ವಾಲಿಟಿ ಬರುತ್ತದೆ ಎಂಬ ದುರಾಸೆಯಿಂದ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಎಗರಿಸಿದ್ದಳು. ಈ ವಿಚಾರ ಮನೆ ಮಾಲೀಕರಿಗೆ ತಿಳಿದು ದೂರು ನೀಡಿದ ಬೆನ್ನಲ್ಲೇ ದೆಹಲಿಯ ದ್ವಾರಕ ಜಿಲ್ಲೆಯ ಆ್ಯಂಟಿ ಬರ್ಗ್ಲರಿ ಸೆಲ್ ಆಕೆಯನ್ನು ಬಂಧಿಸಿದೆ.
ಮನೆಯಲ್ಲಿದ್ದ ಚಿನ್ನದ ಬಳೆ, ಬೆಳ್ಳಿ ಸರ ಮತ್ತು ಬೆಳ್ಳಿ ಆಭರಣಗಳು ಕಳುವಾಗಿದೆ ಮತ್ತು ಈ ಕಳ್ಳತನದ ಹಿಂದೆ ಮನೆಗೆಲಸದಾಕೆಯ ಕೈವಾಡ ಇರಬಹುದೆಂದು ಮಾಲೀಕರು ಶಂಕಿಸಿ, ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ನೀತು ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ, ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಅಲ್ಲದೆ, ಆಕೆ ಮನೆ ಮಾಲೀಕರಿಗೆ ನೀಡಿದ ವಿಳಾಸವೂ ಕೂಡ ನಕಲಿ ಎಂಬುದು ತನಿಖೆಯ ವೇಳೆ ಪತ್ತೆಯಾಗಿದ್ದು, ಆಕೆಯ ಕಳ್ಳತನ ಮಾಡಿದ್ದಾಳೆ ಎಂಬುದು ಬಹುತೇಕ ಖಚಿತವಾಯಿತು.
ಸಮೀಪದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ನಂತರ, ಆರೋಪಿ ನೀತುವಿನ ನಿಜವಾದ ಸ್ಥಳವನ್ನು ಪತ್ತೆಹಚ್ಚಲಾಯಿತು. ಆರೋಪಿಯು ದೆಹಲಿಯಿಂದ ಬ್ಯಾಗ್ ಸಮೇತ ಪರಾರಿಯಾಗಲು ಯತ್ನಿಸುತ್ತಿದ್ದಾಗ ಆಕೆಯನ್ನು ಬಂಧಿಸಲಾಗಿದ್ದು, ಆಕೆಯ ಬಳಿಯಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದ್ವಾರಕ ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ನೀತು ತಾನು ರಾಜಸ್ಥಾನದ ನಿವಾಸಿ ಎಂದು ಬಾಯ್ಬಿಟ್ಟಿದ್ದಾಳೆ. ತನ್ನ ಪತಿ ಮಾದಕ ವ್ಯಸನಿಯಾಗಿದ್ದು, ಸದಾ ನನ್ನನ್ನು ಥಳಿಸುತ್ತಿದ್ದ, ಈ ಕಾರಣಕ್ಕೆ ನಾನು ರಾಜಸ್ಥಾನ ಬಿಟ್ಟು ದೆಹಲಿಗೆ ಬಂದೆ ಎಂದು ಬಹಿರಂಗಪಡಿಸಿದ್ದಾಳೆ. ಹಲವಾರು ಮನೆಗಳಲ್ಲಿ ಮನೆಗೆಲಸ ಮಾಡುವುದರ ನಡುವೆಯೇ ಆಕೆ ಇನ್ಸ್ಟಾಗ್ರಾಂ ರೀಲ್ಸ್ ಮತ್ತು ಯೂಟ್ಯೂಬ್ ವಿಡಿಯೋ ವ್ಯಾಮೋಹವನ್ನು ಬೆಳೆಸಿಕೊಂಡಿದ್ದಳು. ವಿಡಿಯೋಗಳನ್ನು ಮಾಡಲು DSLR ಕ್ಯಾಮೆರಾವನ್ನು ಖರೀದಿಸಲು ಯಾರೋ ಸಲಹೆ ನೀಡಿದರು. ಈ ಕ್ಯಾಮೆರಾ ಉತ್ತಮ ರೆಸಲ್ಯೂಶನ್ ನೀಡುತ್ತದೆ ಎಂದರು. ಆದರೆ, ಕ್ಯಾಮೆರಾದ ಬೆಲೆಯನ್ನು ಪರಿಶೀಲಿಸಿದಾಗ, ಖರೀದಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡೆ. ಸಂಬಂಧಿಕರ ಬಳಿಯೂ ಸಾಲ ಕೇಳಿದರೂ ಕೊಡಲು ನಿರಾಕರಿಸಿದರು. ದ್ವಾರಕಾದ ಬಂಗಲೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ, ಆ ಮನೆಯಲ್ಲಿದ್ದ ಆಭರಣಗಳನ್ನು ನೋಡಿ, ಕ್ಯಾಮೆರಾಗೆ ಹಣವನ್ನು ಪಡೆಯಲು ಅದನ್ನು ಕಳ್ಳತನ ಮಾಡಿದೆ ಎಂದು ಪೊಲೀಸರ ಮುಂದೆ ನೀತು ತಪ್ಪೊಪ್ಪಿಕೊಂಡಿದ್ದಾಳೆ.(ಏಜೆನ್ಸೀಸ್)
ಅನಂತ್-ರಾಧಿಕಾ ಮದ್ವೆ: ಅಂಬಾನಿಯ 3.6 ಲಕ್ಷ ರೂ. ಆಫರ್ ತಿರಸ್ಕರಿಸಿದ ಯುವತಿ! ಅಚ್ಚರಿಯ ಮಾಹಿತಿ ಇಲ್ಲಿದೆ….
ಕಾಲೇಜ್ ಫಂಕ್ಷನ್ಗೆ ಈ ರೀತಿ ಬರ್ತಾರಾ? ತುಂಡುಡುಗೆ ತೊಟ್ಟು ಬಂದ ಅಮಲಾ ವಿರುದ್ಧ ಆಕ್ರೋಶ
ನನ್ನ ವಿಚಾರದಲ್ಲಿ ಸುಮ್ಮನಿದ್ರೆ ಒಳ್ಳೆಯದು! ದರ್ಶನ್ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಖ್ಯಾತ ನಟ