ಕಾಲೇಜ್ ಫಂಕ್ಷನ್​ಗೆ ಈ ರೀತಿ ಬರ್ತಾರಾ? ತುಂಡುಡುಗೆ ತೊಟ್ಟು ಬಂದ ಅಮಲಾ ವಿರುದ್ಧ ಆಕ್ರೋಶ

Amala Paul
Published on

ಚೆನ್ನೈ: ಕಾಲೇಜು ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸಿದ್ದ ವೇಳೆ ಬಹುಭಾಷಾ ನಟಿ ಅಮಲಾ ಪೌಲ್​ ಧರಿಸಿದ್ದ ಉಡುಗೆ ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ. ನಟಿಯಾದವಳು ಎಲ್ಲಿಗೆ ಯಾವ ಡ್ರೆಸ್​ ಧರಿಸಿ ಬರಬೇಕೆಂಬ ಕನಿಷ್ಠ ಜ್ಞಾನ ಇಲ್ಲವೇ ಎಂಬ ಆಕ್ರೋಶದ ಮಾತುಗಳು ವ್ಯಕ್ತವಾಗುತ್ತಿವೆ.

ಕೇರಳದ ಕೊಚ್ಚಿಯಲ್ಲಿ ನಡೆದ ಕಾಲೇಜು ಕಾರ್ಯಕ್ರಮವೊಂದಕ್ಕೆ ಅಮಲಾ ಪೌಲ್​ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅಮಲಾ ಅವರು ಕಪ್ಪು ಬಣ್ಣದ ಡೀಪ್​ ನೆಕ್​ ಶಾರ್ಟ್​ ಫ್ರಾಕ್​ ಧರಿಸಿ ಬಂದಿದ್ದರು. ಎದೆ ಸೀಳು ಎದ್ದು ಕಾಣುವಂತಿತ್ತು. ಹೀಗಾಗಿ ಅಮಲಾ ಪೌಲ್​​ ವಿರುದ್ಧ ಕ್ರಿಶ್ಚಿಯನ್ ಅಸೋಸಿಯೇಷನ್ ​​ಅಂಡ್​ ಅಲಯನ್ಸ್​ ಫಾರ್​ ಸೋಶಿಯಲ್​ ಆ್ಯಕ್ಸನ್​ (ಸಿಎಎಸ್​ಎ) ಸಂಘ ಆಕ್ರೋಶ ಹೊರಹಾಕಿದೆ.

ನಟಿಯಾಗಿ ಎಷ್ಟು ಪ್ರಬುದ್ಧಳು ಎಂಬುದು ತುಂಬಾ ಮುಖ್ಯವಾಗುತ್ತದೆ. ನಿನ್ನನ್ನು ಆಹ್ವಾನಿಸಿರುವುದು ಕಾಲೇಜು ಕಾರ್ಯಕ್ರಮಕ್ಕೆ ಹೊರತು ಮುಂಬೈನ ಬಾರ್​ ಉದ್ಘಾಟನೆಗೆ ಅಲ್ಲ. ಮಲಯಾಳಂ ಚಿತ್ರರಂಗದಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಗೌರವಯುತವಾಗಿ ನಡೆದುಕೊಳ್ಳುವ ಎಷ್ಟೋ ನಟ-ನಟಿಯರಿದ್ದಾರೆ. ಆದರೆ, ಅಂಥವರನ್ನು ನೋಡಿ ಕಲಿಯಿರಿ. ಅದನ್ನು ಬಿಟ್ಟು ಈ ರೀತಿಯಾಗಿ ಪ್ರಚೋದನಾಕಾರಿ ಉಡುಗೆ ಧರಿಸಿ ಕಾಲೇಜು ಕಾರ್ಯಕ್ರಮಕ್ಕೆ ಬರುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಸಿಎಎಸ್​ಎ ತನ್ನ ಫೇಸ್​ಬುಕ್​ ಪೇಜ್​ನಲ್ಲಿ ಕಿಡಿಕಾರಿದೆ.

ಅಂದಹಾಗೆ ಬಹುಭಾಷಾ ನಟಿ ಅಮಲಾ ಪೌಲ್​ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್​ ಅಭಿನಯದ ಸೂಪರ್​ ಹಿಟ್​ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್​ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್​ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್​ನ “ಮೈನಾ” ಚಿತ್ರ​ದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್​, ವಿಕ್ರಮ್​, ಸೂರ್ಯ, ಆರ್ಯ, ಜಯಂ ರವಿ, ಧನುಷ್​ ಸೇರಿದಂತೆ ಕಾಲಿವುಡ್​ ಸೂಪರ್​ಸ್ಟಾರ್​ಗಳ ಜೊತೆ ನಟಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅಮಲಾ, ಪ್ರತಿಯೊಂದು ವಿಚಾರವನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಾರೆ. ಅಮಲಾ ಒಂದು ರೀತಿಯಲ್ಲಿ ತೆರೆದ ಪುಸ್ತಕವಿದ್ದಂತೆ. ಅವರ ಬಗ್ಗೆ ಬಹುತೇಕ ಸಂಗತಿಗಳು ಎಲ್ಲರಿಗೂ ತಿಳಿದಿದೆ. 2014ರಲ್ಲಿ ಅಮಲಾ, ತಮಿಳು ನಿರ್ದೇಶಕ ಎ.ಎಲ್. ವಿಜಯ್ ಮದುವೆಯಾಗಿದ್ದರು. ಆದರೆ, ಮೂರು ವರ್ಷಗಳಲ್ಲೇ ಇಬ್ಬರ ನಡುವೆ ಬಿರುಕುಂಟಾಗಿ 2017ರಲ್ಲಿ ವಿಚ್ಛೇದನ ಪಡೆದಿದ್ದರು. ವಿಜಯ್ ಅವರಿಂದ ವಿಚ್ಛೇದನ ಪಡೆದ ಬಳಿಕ ಅಮಲಾ ಮತ್ತೆ ಸಿನಿಮಾಗಳಲ್ಲಿ ಬಿಜಿಯಾದರು. ಇದರ ನಡುವೆ ತಮ್ಮ ಬಾಯ್​ಫ್ರೆಂಡ್ ಜಗತ್​ ದೇಸಾಯಿ ಅವರನ್ನು​ ಪರಿಚಯಿಸುವ ಮೂಲಕ ತಾವು ಮತ್ತೊಮ್ಮೆ ಪ್ರೀತಿಯ ಬಲೆಯಲ್ಲಿ ಬಿದ್ದಿರುವುದನ್ನು ಬಹಿರಂಗಪಡಿಸಿದರು. ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಕೆಲಸ ಮಾಡುವ ಜಗತ್​ ದೇಸಾಯಿ ಜತೆ ಕಳೆದ ವರ್ಷ ನವೆಂಬರ್​ 5ರಂದು ಅಮಲಾ ಹಸೆಮಣೆ ಏರಿದರು.

ಸದ್ಯ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿರುವ ಅಮಲಾ, ಗೆಳೆಯ ಜಗತ್ ದೇಸಾಯಿ ಅವರನ್ನು ಮದುವೆಯಾಗಿ ಸಾಂಸಾರಿಕ ಜೀವನ ಸಾಗಿಸುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದಷ್ಟೇ ಅಮಲಾ ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಅಮಲಾ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಮಲಾ ಅವರಿಗೆ ಜೂನ್ 11 ರಂದು ಹೆರಿಗೆಯಾಯಿತು. ವಿಶೇಷ ವಿಡಿಯೋ ಮೂಲಕ ಗಂಡು ಮಗು ಆಗಿರುವುದನ್ನು ಬಹಿರಂಗಪಡಿಸಿದರು. ಪತಿ ಜಗತ್ ದೇಸಾಯಿ ತಾಯಿ ಮತ್ತು ಮಗುವಿಗೆ ಅದ್ಧೂರಿ ಸ್ವಾಗತ ಕೋರಿದ ವಿಡಿಯೋವನ್ನು ಸಹ ಹಂಚಿಕೊಂಡಿದ್ದರು. ಅಮಲಾ ಪೌಲ್ ದಂಪತಿ ತಮ್ಮ ಮಗುವಿಗೆ ILAI (ಇಳೈ) ಎಂದು ಹೆಸರಿಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net