ವಿವಾದದ ಸುಳಿಯಲ್ಲಿ ಕಲ್ಕಿ ಸಿನಿಮಾ: ಅಮಿತಾಭ್​ ಬಚ್ಚನ್​, ಪ್ರಭಾಸ್​ಗೆ ಲೀಗಲ್​ ನೋಟಿಸ್​ ಜಾರಿ

Kalki
Published on

ಮುಂಬೈ: ಇತ್ತೀಚೆಗಷ್ಟೇ ತೆರೆಕಂಡ ‘ಕಲ್ಕಿ 2898 ಎಡಿ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು ಗೊತ್ತೇ ಇದೆ. ವಿಶ್ವಾದ್ಯಂತ ಕಲ್ಕಿ ಸಿನಿಮಾ ಈಗಾಗಲೇ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಅನೇಕ ವರದಿಗಳು ಹೇಳಿವೆ. ಇದರ ನಡುವೆ ಮಾಜಿ ಕಾಂಗ್ರೆಸ್​ ನಾಯಕ ಹಾಗೂ ಕಲ್ಕಿಧಾಮ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ನಿರ್ಮಾಪಕ ಅಶ್ವಿನಿ ದತ್, ಬಾಲಿವುಡ್ ಲೆಜೆಂಡರಿ ನಟ ಅಮಿತಾಭ್​ ಬಚ್ಚನ್​ ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.

ಉತ್ತರ ಪ್ರದೇಶದ ಕಲ್ಕಿಧಾಮ ಪೀಠಾಧೀಶ್ವರರಾದ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಕಲ್ಕಿ ಚಿತ್ರವನ್ನು ಟೀಕಿಸಿದ್ದಾರೆ. ಸಿನಿಮಾದಲ್ಲಿ ಕೃತಕ ಗರ್ಭದ ಮೂಲಕ ಕಲ್ಕಿಗೆ ಜನ್ಮ ನೀಡಲಿರುವ ತಾಯಿಯನ್ನು (ದೀಪಿಕಾ) ತೋರಿಸುವ ಮೂಲಕ ಜಗತ್ತಿನ ಕೋಟ್ಯಂತರ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಹಿಂದು ಧರ್ಮಗ್ರಂಥಗಳನ್ನು ಬದಲಾಯಿಸಿ ಮನಸೋ ಇಚ್ಛೆ ಸಿನಿಮಾ ಮಾಡುವುದು ಇಂದು ಹಲವರಿಗೆ ಫ್ಯಾಷನ್ ಆಗಿಬಿಟ್ಟಿದೆ ಎಂದು ಕಿಡಿಕಾರಿದರು.

ಕಲ್ಕಿ ಚಿತ್ರ ಸನಾತನ ಧರ್ಮ ಮತ್ತು ಹಿಂದು ಪುರಾಣಗಳಿಗೆ ಅವಮಾನ ಮಾಡುವಂತಿದೆ. ಭಾರತವು ಸನಾತನ ಧರ್ಮದ ಮೇಲಿನ ನಂಬಿಕೆ, ಭಾವನೆಗಳು ಮತ್ತು ಆಧ್ಯಾತ್ಮಿಕತೆಯನ್ನು ಒಳಗೊಂಡಿರುತ್ತದೆ, ಅವುಗಳ ಮೌಲ್ಯಗಳನ್ನು ಬದಲಾಯಿಸಬಾರದು. ಸಾಂಪ್ರದಾಯಿಕ ಧರ್ಮಗ್ರಂಥಗಳನ್ನು ಬದಲಾಯಿಸಬೇಡಿ ಎಂದು ಲೀಗಲ್​ ನೋಟಿಸ್​ನಲ್ಲಿ ಕೃಷ್ಣಂ ಅವರು ಉಲ್ಲೇಖಿಸಿದ್ದಾರೆ.

ಕಲ್ಕಿಯನ್ನು ವಿಷ್ಣುವಿನ ಕೊನೆಯ ಅವತಾರವೆಂದು ಪರಿಗಣಿಸಲಾಗಿದೆ. ಕಲ್ಕಿಯ ಅವತಾರದ ಬಗ್ಗೆ ಬಹಳಷ್ಟು ಬರೆಯಲಾಗಿದೆ. ಪುರಾಣಗಳಲ್ಲಿ ಹೇಳಲಾಗಿದೆ. ಇದೇ ಆಧಾರದ ಮೇಲೆ ಪ್ರಧಾನಿ ಮೋದಿ ಅವರು ಕಲ್ಕಿ ದೇವಸ್ಥಾನದ ಅಡಿಪಾಯವನ್ನು ಹಾಕಿದರು ಎಂದು ಕೃಷ್ಣಂ ತಿಳಿಸಿದರು.

ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ, ಕಲ್ಕಿ ಯಶಸ್ವಿಯಾಗಿ ನಾಲ್ಕನೇ ವಾರವನ್ನು ಪ್ರವೇಶಿಸಿದೆ. ಸದ್ಯ ತೆಲುಗು ರಾಜ್ಯಗಳಲ್ಲಿ ಉತ್ತಮ ಗಳಿಕೆಯ ಹಾದಿಯಲ್ಲಿದೆ. ತೆಲುಗು ರಾಜ್ಯದಲ್ಲೇ ಇದುವರೆಗೆ 100 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿದೆ. ಈ ಸಿನಿಮಾವನ್ನು ನಾಗ ಅಶ್ವಿನ್​ ಅವರು ನಿರ್ದೇಶನ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net