ಬೆಂಗಳೂರು: ನಟ ದರ್ಶನ್ ಅಭಿಮಾನಿಗಳಿಂದ ನಿರಂತರ ಜೀವ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಬಿಗ್ಬಾಸ್ ವಿಜೇತ ಹಾಗೂ ನಟ ಪ್ರಥಮ್ ಈ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಭಾರಿ ಸುದ್ದಿಯಾಯಿತು. ಆದರೂ ಈವರೆಗೂ ಬೆದರಿಕೆ ಸಂದೇಶಗಳು ಮಾತ್ರ ನಿಂತಿಲ್ಲ. ಒಂದಲ್ಲ ಒಂದು ವಿಚಾರಕ್ಕೆ ದಾಸನ ಅಭಿಮಾನಿಗಳು ಪ್ರಥಮ್ ವಿರುದ್ಧ ಕಿಡಿಕಾರುತ್ತಲೇ ಇದಾರೆ. ಕೆಲ ದಿನಗಳ ಹಿಂದಷ್ಟೇ ಪ್ರಥಮ್, ದಚ್ಚು ಫ್ಯಾನ್ಸ್ಗೆ ಕೊನೆಯ ಎಚ್ಚರಿಕೆ ನೀಡಿದ್ದರು. ಇದೀಗ ಮತ್ತೊಮ್ಮೆ ದರ್ಶನ್ ಅಭಿಮಾನಿಗಳಿಗೆ ಸುಮ್ಮನಿದ್ರೆ ಒಳ್ಳೆಯದು ಅಂತ ಟಾಂಗ್ ಕೊಟ್ಟಿದ್ದಾರೆ.
ದಯವಿಟ್ಟು ಜಾಸ್ತಿ ಶೇರ್ ಮಾಡಿ. ನೀವು ತೊಂದರೆ ಮಾಡಿದಷ್ಟು ದರ್ಶನ್ ಸರ್ಗೆ ಜಾಮೀನು ಸಿಗುವುದು ಕಷ್ಟ ಆಗುತ್ತದೆ. ನನ್ನ ಪಾಡಿಗೆ ನಾನು ಸುಮ್ಮನಿರುತ್ತೇನೆ. ನನಗೆ ತೊಂದರೆ ಕೊಟ್ಟರೆ ಅವರನ್ನು ಪೋಲೀಸ್ ಎತ್ತಾಕಿಕೊಂಡು ಹೋಗಿ ರುಬ್ಬುತ್ತಾರೆ. ಆಮೇಲೆ ನನ್ನ ಸಿನಿಮಾಗೆ ಬೈದುಕೊಂಡೇ ಪ್ರಚಾರ ಕೊಡ್ತಾ ಇದ್ದೀರಾ, ನನ್ನ ಬಗ್ಗಿಸೋಕೆ ನಿಮ್ಮಿಂದ ಆಗುವುದಿಲ್ಲ ನೆನಪಿರಲಿ. ನೀವೇ ಸುಮ್ಮನಿದ್ರೆ ಒಳ್ಳೆಯದು ಎನ್ನುವ ಮೂಲಕ ದಚ್ಚು ಅಭಿಮಾನಿಗಳಿಗೆ ಪ್ರಥಮ್ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ. ಅದರೊಂದಿಗೆ ತನಗೆ ಬೆದರಿಕೆ ಹಾಕಿದ ದರ್ಶನ್ ಅಭಿಮಾನಿಯೊಬ್ಬನನ್ನು ಪೊಲೀಸರು ಠಾಣೆಗೆ ಕರೆತಂದು ಸರಿಯಾಗಿ ಕ್ಲಾಸ್ ತೆಗೆದುಕೊಂಡಿರುವ ಸಂಬಂಧ ಮಾಧ್ಯಮ ವರದಿಯ ವಿಡಿಯೋ ತುಣಕನ್ನು ಪ್ರಥಮ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಪ್ರಥಮ್ ಕೊಟ್ಟಿದ್ದ ಎಚ್ಚರಿಕೆ ಏನು?
ಅರ್ಥ ಮಾಡ್ಕೊಳ್ಳಿ, ಅಭಿಮಾನಿಗಳನ್ನು ಅವಮಾನ ಮಾಡಲೇಬೇಕು ಅಂತಿದ್ದರೆ ಮುಖವನ್ನು ಬ್ಲರ್ ಮಾಡದೇ ಒರಿಜಿನಲ್ ಪೋಸ್ಟ್ ಹಾಕುತ್ತಿದ್ದೆ. ನನಗೆ ನಿಮ್ಮ ಕುಟುಂಬದ ಚಿಂತೆ. ಕೆಟ್ಟದಾಗಿ ಟ್ರೋಲ್ ಮಾಡುತ್ತಿರುವ ಎಲ್ಲರ ಮೇಲೂ ಎಫ್ಐಆರ್ ಆಗಿದೆ. ಇದೀಗ ಪೊಲೀಸ್ ಠಾಣೆ ಅಲೆದಾಡುತ್ತಿದ್ದಾರೆ. ನಕಲಿ ಪ್ರೊಫೈಲ್ ಅಂತ ಕಣ್ಣೀರಾಕುತ್ತಿದ್ದಾರೆ. ಅದರೆ, ಯಾರನ್ನೂ ಬಂಧಿಸಬೇಡಿ ಎಂದು ಕೇಳಿಕೊಂಡಿದ್ದೇನೆ. ಕೊನೆಯದಾಗಿ ಎಚ್ಚರಿಕೆ ನೀಡುತ್ತಿದ್ದೇನೆ, ಪ್ರಥಮ್ ಬಗ್ಗೆ ಹುಷಾರಾಗಿರಿ ಎಂದು ನಟ ಪ್ರಥಮ್ ಎಕ್ಸ್ನಲ್ಲಿ ಈ ಹಿಂದೆ ಬರೆದುಕೊಂಡು ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು.
ಅರ್ಥ ಮಾಡ್ಕೊಳ್ಳಿ;fansನ ಅವಮಾನ ಮಾಡ್ಲೇಬೇಕು ಅಂತಿದ್ರೆfaceಬ್ಲರ್ ಮಾಡದೇ originalಹಾಕ್ತಿದ್ದೆ;ನನಗೆ ನಿಮ್ಮ ಕುಟುಂಬದ ಚಿಂತೆ.ಕೆಟ್ಟtrollಮಾಡ್ತಿರೋ ಎಲ್ಲರ ಮೇಲೂFIR ಆಗಿದೆ.station ಅಲೀತಿದ್ದಾರೆ,fake profileಅಂತ ಕಣ್ಣೇರಿಡ್ತಾವ್ರೆ.ಯಾರನ್ನೂarrestಮಾಡ್ಬೇಡಿ ಅಂತ ಕೇಳ್ಕೊಂಡಿದ್ದೀನಿ!last warning;#ಪ್ರಥಮ್ ಬಗ್ಗೆ ಹುಷಾರಾಗಿರಿ pic.twitter.com/XFRM7obIeN
— Olle Hudga Pratham (@OPratham) July 13, 2024
ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳಿಗೇಕೆ ಸಿಟ್ಟು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಮ್ಮ ಬಾಸ್ ದರ್ಶನ್ ಅವರದ್ದು ಏನು ತಪ್ಪಿಲ್ಲ ಎಂದು ಅಭಿಮಾನಿಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ನಟ ಪ್ರಥಮ್ ಅವರನ್ನು ಖಾಸಗಿ ಸುದ್ದಿವಾಹಿನಿಯೊಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಪ್ರಥಮ್, ಅನ್ನಪೂರ್ಣೇಶ್ವರಿ ನಗರ ಠಾಣೆ ನಮ್ಮ ಮನೆಯಿಂದ ಹತ್ತಿರದಲ್ಲಿದೆ. ಅಲ್ಲಿನ ಇನ್ಸ್ಪೆಕ್ಟರ್ ಅಥವಾ ಎಸಿಪಿಗೆ ಹೇಳಿ ಒಂದು ವಾರದ ಮಟ್ಟಿಗೆ ಪೊಲೀಸ್ ಕಾನ್ಸ್ಟೆಬಲ್ ಆಗಲು ನನಗೆ ಅನುಮತಿ ಕೊಡಿಸಿ, ನಗೆ ಸಂಬಳ ಕೊಡಬೇಕಾಗಿಲ್ಲ, ಒಂದು ದೊಣ್ಣೆ ಸಿಕ್ಕಿದರೆ ಸಾಕು ಸ್ಟೇಷನ್ ಮುಂದೆ ನಿಂತಿರುವವರಿಗೆಲ್ಲರಿಗೂ ನಾಯಿಗೆ ಹೊಡೆದಂಗೆ ಹೊಡೆಯುತ್ತೇನೆ. ಏಕೆಂದರೆ, ಅಲ್ಲಿರುವ ಒಬ್ಬ ಮಗಾನೂ ಅವರ ಅಮ್ಮನಿಗೆ ಒಂದು ಹೊತ್ತು ಹಿಟ್ಟು ಕೊಡಿಸುವ ಯೋಗ್ಯತೆ ಇಲ್ಲ. ಕೆಲವರು ಭ್ರಮೆಯಲ್ಲಿದ್ದಾರೆ. ನಮ್ಮಿಂದ ಟಿಆರ್ಪಿ ಮತ್ತು ನಮ್ಮ ಬಾಸ್ನಿಂದ ಟಿಆರ್ಪಿ ಬರುತ್ತೆ ಎಂಬ ಭ್ರಮಾ ಲೋಕದಲ್ಲಿ ಮುಳುಗಿದ್ದಾರೆ. ಇವರೆಲ್ಲ ವಾಟ್ಸ್ಆ್ಯಪ್ ಯೂನಿವರ್ಸಿಟಿ ಮಂದಿ, ಮಾಧ್ಯಮ ಹೇಗೆ ನಡೆಯುತ್ತದೆ ಎಂಬುದೇ ಗೊತ್ತಿಲ್ಲ ಎಂದು ದರ್ಶನ್ ಅಭಿಮಾನಿಗಳನ್ನು ಪ್ರಥಮ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ಪ್ರಥಮ್ ಅವರ ಮಾತುಗಳಿಂದ ರೊಚ್ಚಿಗೆದ್ದಿರುವ ದರ್ಶನ್ ಅಭಿಮಾನಿಗಳು ನಿರಂತರವಾಗಿ ಪ್ರಥಮ್ ಅವರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೆ ಜ್ಞಾನ ಭಾರತಿ ನಗರ ಪೊಲೀಸ್ ಠಾಣೆಗೆ ತೆರಳಿ ದರ್ಶನ್ ಅಭಿಮಾನಿಗಳ ವಿರುದ್ಧ ಪ್ರಥಮ್ ದೂರು ದಾಖಲಿಸಿದ್ದರು. ಆದರೂ, ಬೆದರಿಕೆಗಳು ಬರುತ್ತಲೇ ಇವೆ. ಹೀಗಾಗಿ ಇಂದು ಮತ್ತೊಮ್ಮೆ ಪ್ರಥಮ್ ದರ್ಶನ್ ಅಭಿಮಾನಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಆರೋಪಿಗಳ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೊಲೆಯಾದ ರೇಣುಕಾಸ್ವಾಮಿ, ಆರೋಪಿ ಪವಿತ್ರಾ ಗೌಡ ಸೇರಿದಂತೆ ಅನೇಕ ನಟಿಯರಿಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಆರೋಪವಿದೆ. ಹೀಗಾಗಿ ಆತನ ಇನ್ಸ್ಟಾಗ್ರಾಂ ಖಾತೆ ಮತ್ತು ವಾಟ್ಸ್ಆ್ಯಪ್ ಖಾತೆಯ ಡೇಟಾವನ್ನು ಮರಳಿ ಪಡೆಯುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದ ಪಟ್ಟಣಗೆರೆ ಶೆಡ್ ಸುತ್ತಮುತ್ತಲಿಗೆ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್ ಅನ್ನು ವಶಕ್ಕೆ ಪಡೆಯಲಾಗಿದ್ದು, ಬರ್ ತಜ್ಞರು ಪರಿಶೀಲಿಸಿ ದತ್ತಾಂಶವನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಈ ಪ್ರಕರಣ ಸಂಬಂಧ ಸಾಕಷ್ಟು ಸಾಕ್ಷಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.
ಜುಲೈ 18ರಂದು ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಯಲ್ಲಿ ದರ್ಶನ್ ಮತ್ತು ಇನ್ನಿತರ ಆರೋಪಿಗಳನ್ನು ಮತ್ತೊಮ್ಮೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಮತ್ತೊಮ್ಮೆ 14 ದಿನಗಳ ಕಾಲ ಅಂದರೆ ಆಗಸ್ಟ್ 1ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. ಇನ್ನೊಂದೆಡೆ ನಟ ದರ್ಶನ್ ಮನೆಯೂಟಕ್ಕೆ ಅನುಮತಿ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿ ಎಂದಿರುವ ನ್ಯಾಯಾಲಯ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದೆ.
ಏನಿದು ಪ್ರಕರಣ?
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.
ನಟ ದರ್ಶನ್ ಸಹವಾಸದಿಂದ ಮಗ ಜೈಲು ಪಾಲು: ಕೊರಗಿನಲ್ಲೇ ಪ್ರಾಣಬಿಟ್ಟ ಆರೋಪಿ ರಘು ತಾಯಿ