

ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್ನ “ಮೈನಾ” ಚಿತ್ರದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ, ಧನುಷ್ ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅಮಲಾ, ಪ್ರತಿಯೊಂದು ವಿಚಾರವನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಾರೆ. ಅಮಲಾ ಒಂದು ರೀತಿಯಲ್ಲಿ ತೆರೆದ ಪುಸ್ತಕವಿದ್ದಂತೆ. ಅವರ ಬಗ್ಗೆ ಬಹುತೇಕ ಸಂಗತಿಗಳು ಎಲ್ಲರಿಗೂ ತಿಳಿದಿದೆ. 2014ರಲ್ಲಿ ಅಮಲಾ, ತಮಿಳು ನಿರ್ದೇಶಕ ಎ.ಎಲ್. ವಿಜಯ್ ಮದುವೆಯಾಗಿದ್ದರು. ಆದರೆ, ಮೂರು ವರ್ಷಗಳಲ್ಲೇ ಇಬ್ಬರ ನಡುವೆ ಬಿರುಕುಂಟಾಗಿ 2017ರಲ್ಲಿ ವಿಚ್ಛೇದನ ಪಡೆದಿದ್ದರು. ವಿಜಯ್ ಅವರಿಂದ ವಿಚ್ಛೇದನ ಪಡೆದ ಬಳಿಕ ಅಮಲಾ ಮತ್ತೆ ಸಿನಿಮಾಗಳಲ್ಲಿ ಬಿಜಿಯಾದರು. ಇದರ ನಡುವೆ ತಮ್ಮ ಬಾಯ್ಫ್ರೆಂಡ್ ಜಗತ್ ದೇಸಾಯಿ ಅವರನ್ನು ಪರಿಚಯಿಸುವ ಮೂಲಕ ತಾವು ಮತ್ತೊಮ್ಮೆ ಪ್ರೀತಿಯ ಬಲೆಯಲ್ಲಿ ಬಿದ್ದಿರುವುದನ್ನು ಬಹಿರಂಗಪಡಿಸಿದರು. ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಕೆಲಸ ಮಾಡುವ ಜಗತ್ ದೇಸಾಯಿ ಜತೆ ಕಳೆದ ವರ್ಷ ನವೆಂಬರ್ 5ರಂದು ಅಮಲಾ ಹಸೆಮಣೆ ಏರಿದರು.
ಸದ್ಯ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿರುವ ಅಮಲಾ, ಗೆಳೆಯ ಜಗತ್ ದೇಸಾಯಿ ಅವರನ್ನು ಮದುವೆಯಾಗಿ ಸಾಂಸಾರಿಕ ಜೀವನ ಸಾಗಿಸುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದಷ್ಟೇ ಅಮಲಾ ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಅಮಲಾ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ತಾಜಾ ಸಂಗತಿ ಏನೆಂದರೆ, ಅಮಲಾ ಅವರು ಹೆರಿಗೆ ನಂತರ ತೂಕ ಹೆಚ್ಚಿಸಿಕೊಂಡಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದನ್ನು ನೋಡಿದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ತುಂಬಾ ಬದಲಾಗಿರುವ ಅಮಲಾ, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು. ಈ ವೇಳೆ ಸೆರೆಹಿಡಿದ ಅವರ ಫೋಟೋ ಸದ್ಯ ವೈರಲ್ ಆಗುತ್ತಿದೆ. ಹೆರಿಗೆ ಬಳಿಕ ತೂಕ ಹೆಚ್ಚಳ ಕಾಮನ್ ಎಂದು ಕೆಲವರು ಹೇಳಿದರೆ, ತೂಕ ಇಳಿಸಿಕೊಳ್ಳಿ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ.
ಅಂದಹಾಗೆ ಅಮಲಾ ಅವರಿಗೆ ಜೂನ್ 11 ರಂದು ಹೆರಿಗೆಯಾಯಿತು. ವಿಶೇಷ ವಿಡಿಯೋ ಮೂಲಕ ಗಂಡು ಮಗು ಆಗಿರುವುದನ್ನು ಬಹಿರಂಗಪಡಿಸಿದರು. ಪತಿ ಜಗತ್ ದೇಸಾಯಿ ತಾಯಿ ಮತ್ತು ಮಗುವಿಗೆ ಅದ್ಧೂರಿ ಸ್ವಾಗತ ಕೋರಿದ ವಿಡಿಯೋವನ್ನು ಸಹ ಹಂಚಿಕೊಂಡಿದ್ದರು. ಅಮಲಾ ಪೌಲ್ ದಂಪತಿ ತಮ್ಮ ಮಗುವಿಗೆ ILAI (ಇಳೈ) ಎಂದು ಹೆಸರಿಟ್ಟಿದ್ದಾರೆ. (ಏಜೆನ್ಸೀಸ್)