ನವದೆಹಲಿ: ಜನಪ್ರಿಯ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಕಾವ್ಯಾ ಕರ್ನಾಟಕ್ ಅವರು ಬಹಿರಂಗಪಡಿಸಿದ ವಿಷಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ಇತ್ತೀಚೆಗಷ್ಟೇ ಮುಕ್ತಾಯವಾಯಿತು. ಈ ಮದುವೆ ಸಮಾರಂಭವನ್ನು ಪ್ರಚಾರ ಮಾಡಲು ಕಾವ್ಯಾ ಅವರಿಗೆ 3.6 ಲಕ್ಷ ರೂ.ಗಳ ಆಫರ್ ನೀಡಲಾಗಿತ್ತಂತೆ. ಆದರೆ, ಆ ಆಫರ್ ಅನ್ನು ಕಾವ್ಯಾ ತಿರಸ್ಕರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ.
ಮುಕೇಶ್ ಅಂಬಾನಿ ಅವರು ನೀಡಿದ ಈ ಆಫರ್ ಇಲ್ಲಿಯವರೆಗೆ ಅವರು ಪ್ರಚಾರಕ್ಕಾಗಿ ತೆಗೆದುಕೊಂಡ ಮೊತ್ತಕ್ಕಿಂತಲೂ ಹೆಚ್ಚು ಎಂದು ಕಾವ್ಯಾ ಹೇಳಿದ್ದಾರೆ. ಸಾಮಾನ್ಯವಾಗಿ ಅಂಬಾನಿ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಪ್ರಚಾರ ಮಾಡಲು ಯಾರೂ ಕೂಡ ಹಿಂಜರಿಯುವುದಿಲ್ಲ. ಆದರೆ, ಕಾವ್ಯಾ ಮಾತ್ರ ಅದನ್ನು ನಿರ್ಲಕ್ಷಿಸಿದ್ದು ಏಕೆ? ಅದಕ್ಕೆ ಕಾರಣ ಆಕೆಯ ಬ್ರ್ಯಾಂಡ್ ವ್ಯಾಲ್ಯೂ ಅಂತೆ. ಮದುವೆ ಪ್ರಚಾರ ತನಗೆ ತೃಪ್ತಿ ನೀಡುವುದಿಲ್ಲ ಎಂದು ಕಾವ್ಯಾ ಹೇಳಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳುವ ಉದ್ದೇಶದಿಂದ ಈ ರೀತಿ ಮಾಡಿದ್ದೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಅಂಬಾನಿಯವರ ಪಿಆರ್ ತಂಡದಿಂದ 3.6 ಲಕ್ಷ ರೂ.ಗಳ ಆಫರ್ ಅನ್ನು ಸ್ವೀಕರಿಸಿದೆ. ಈ ಮದುವೆ ಭಾರತದ ಆರ್ಥಿಕತೆಯನ್ನು ಹೇಗೆ ಹೆಚ್ಚಿಸಲಿದೆ ಎಂಬ ವಿಷಯದ ಬಗ್ಗೆ ವಿಡಿಯೋದಲ್ಲಿ ಮಾತನಾಡುವ ಟಾಸ್ಕ್ ಅನ್ನು ನನಗೆ ನೀಡಲಾಗಿತ್ತು. ಆದರೆ ನಿಯಮಿತ ಪ್ರಚಾರಕ್ಕೆ ತೆಗೆದುಕೊಳ್ಳುವ 3 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ಅವರು ಆಫರ್ ಮಾಡಿದರು ಕೂಡ ನನಗೆ ಇಷ್ಟವಾಗಲಿಲ್ಲ. ನನ್ನ ಪಾಲಕರು ಕೂಡ ಆಫರ್ ಸ್ವೀಕರಿಸುವಂತೆ ಕೇಳಿಕೊಂಡರು. ಆದರೂ ನಾನು ಒಪ್ಪಲಿಲ್ಲ ಎಂದು ಕಾವ್ಯಾ ಹೇಳಿದ್ದಾರೆ.
ಗುಂಪಿನಲ್ಲಿ ಗೋವಿಂದ ಅನ್ನುವ ಸ್ವಭಾವ ನನ್ನದಲ್ಲ. ಎಲ್ಲರೂ ಅನಂತ್ ಅಂಬಾನಿ ಮದುವೆ ಪ್ರಚಾರ ಮಾಡುತ್ತಿದ್ದರೆ. ಆದರೆ, ನನಗಿದು ಬೇಡ. ನಾನು ಪ್ರಚಾರ ಮಾಡಿದ್ದಲ್ಲಿ ನನ್ನ ಫಾಲೋವರ್ಸ್ ನನ್ನ ಬ್ರಾಂಡ್ ಮೇಲೆ ನಂಬಿಕೆ ಕಳೆದುಕೊಳ್ಳಲಿದ್ದಾರೆ. ಜಿಯೋ ಬೆಲೆ ಏರಿಕೆ ಆಗಿದೆ. ಅಂಬಾನಿಯಂತಹ ಕಾರ್ಪೊರೇಟ್ ದಿಗ್ಗಜರನ್ನು ಪ್ರಚಾರ ಮಾಡುವುದರಿಂದ ತನ್ನ ಪ್ರಾಮಾಣಿಕತೆಯನ್ನು ನನ್ನ ಪ್ರೇಕ್ಷಕರ ಮುಂದೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಕಾವ್ಯಾ ಹೇಳಿದರು.
ನನ್ನ ನೈತಿಕತೆಗೆ ಧಕ್ಕೆ ತರಲು ಬಯಸದ ಕಾರಣ ಈ ಪ್ರಸ್ತಾಪವನ್ನು ನಾನು ನಿರಾಕರಿಸಿದ್ದೇನೆ. ಹಾಗಂತ ನಾನು ಅಂಬಾನಿ ವಿರೋಧಿ ಎಂದಲ್ಲ, ಈ ಹಿಂದೆ ನಾನು ಅನಂತ್ ಅಂಬಾನಿ ಅವರ ಕನಸಿನ ಯೋಜನೆಯಾದ ವಂತರಾವನ್ನು ಪ್ರಚಾರ ಮಾಡಿದ್ದೇನೆ. ಆದರೆ, ಈ ಮದುವೆಯಿಂದ ಭಾರತದ ಆರ್ಥಿಕತೆ ಹೆಚ್ಚುತ್ತದೆ ಎಂದು ಖಚಿತವಾಗಿ ಹೇಳಲಾಗದು. ಅದಕ್ಕಾಗಿಯೇ ಮದುವೆಯ ಪ್ರಚಾರವನ್ನು ನಿರಾಕರಿಸಿದೆ ಎಂದು ಕಾವ್ಯಾ ಹೇಳಿದ್ದಾರೆ.
3.6 ಲಕ್ಷ ರೂ. ಡೀಲ್ ಆಕರ್ಷಕವಾಗಿದೆ. ಆದರೆ ದೀರ್ಘಾವಧಿಯ ಪ್ರಯೋಜನಗಳನ್ನು ನೋಡಬೇಕೆ ಹೊರತು, ಅಲ್ಪಾವಧಿಯ ಹಣವಲ್ಲ. ನೀವು ಪ್ರಾಮಾಣಿಕರಾಗಿದ್ದರೆ ದೀರ್ಘಾವಧಿಯಲ್ಲಿ ನೀವು ನಿಷ್ಠಾವಂತ ಅನುಯಾಯಿಗಳನ್ನು ಹೊಂದಿರುತ್ತೀರಿ. ಅದಕ್ಕೆ ಬೆಲೆ ಕಟ್ಟಲಾಗದು ಎಂದು ಕಾವ್ಯ ಕರ್ನಾಟಕ್ ಅಭಿಪ್ರಾಯ ವ್ಯಕ್ತಪಡಿಸಿದರು. ಅಂದಹಾಗೆ ಕಾವ್ಯಾ ಅವರು ಇನ್ಸ್ಟಾಗ್ರಾಂನಲ್ಲಿ 16 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. (ಏಜೆನ್ಸೀಸ್)
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಬಂಧನ: ಕೊನೆಗೂ ಮೌನ ಮುರಿದ ಧ್ರುವ ಸರ್ಜಾ!
ಮಳೆಗಾಲದಲ್ಲಿ ಹೆಚ್ಚು ಚಿಕನ್ ತಿನ್ನುತ್ತೀರಾ? ಈ ಆಘಾತಕಾರಿ ಸಂಗತಿ ನಿಮಗೆ ತಿಳಿದಿರಲೇಬೇಕು..