ಮಹಿಳೆಯರಿಗೆ ಶಕ್ತಿ, ಮಕ್ಕಳಿಗೆ ನಿಶ್ಶಕ್ತಿ?: ವಾರಕ್ಕೆ 2 ದಿನ ನೀಡುತ್ತಿದ್ದ ಮೊಟ್ಟೆ-ಬಾಳೆಹಣ್ಣು ಇನ್ನು ಒಂದೇ ದಿನ!

Bisiyoota
Published on

ಬೆಂಗಳೂರು: ಶಕ್ತಿ ಯೋಜನೆ ಮೂಲಕ ಉಚಿತವಾಗಿ ಪ್ರಯಾಣಿಸಲು ಮಹಿಳೆಯರಿಗೆ ಶಕ್ತಿ ನೀಡುತ್ತಿರುವ ಸರ್ಕಾರ, ಶಾಲಾ ಮಕ್ಕಳನ್ನು ನಿಶ್ಶಕ್ತಿಗೊಳಿಸುವಂಥ ಕೆಲಸಕ್ಕೆ ಮುಂದಾಗಿದೆ. ಶಕ್ತಿ ಯೋಜನೆಗಾಗಿ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ಮತ್ತೊಂದೆಡೆ ಮಕ್ಕಳ ಬಿಸಿಯೂಟದ ವಿಚಾರವಾಗಿ ಅನುದಾನ ಕೊರತೆ ಕಾಡಲಾರಂಭಿಸಿದೆ.

ರಾಜ್ಯದ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಮಧ್ಯಾಹ್ನದ ಬಿಸಿಯೂಟದ ಜತೆಗೆ ಪ್ರಧಾನ ಮಂತ್ರಿ ಪೋಷಣ ಅಭಿಯಾನದ ಅಡಿ ವಾರದಲ್ಲಿ 2 ದಿನ ನೀಡುತ್ತಿದ್ದ ಮೊಟ್ಟೆ/ಬಾಳೆಹಣ್ಣನ್ನು ಸದ್ಯ ಒಂದು ದಿನಕ್ಕೆ ಕಡಿತಗೊಳಿಸಲಾಗಿದೆ. ಈ ಕುರಿತು ಮಧ್ಯಾಹ್ನದ ಬಿಸಿಯೂಟ ಯೋಜನೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ ಅಥವಾ ಬಾಳೆಹಣ್ಣು/ಶೇಂಗಾ ಚಿಕ್ಕಿ ವಿತರಿಸುವಂತೆ ಸರ್ಕಾರ ಸರ್ಕಾರ ಸೂಚನೆ ನೀಡಿದೆ.

ಪ್ರತಿ ವಿದ್ಯಾರ್ಥಿಗೆ ವಾರದಲ್ಲಿ ಒಂದು ಮೊಟ್ಟೆಯಂತೆ ಮೊದಲ ಹಂತದಲ್ಲಿ ಜೂ.20ರಿಂದ ಜು.15ರ ವರೆಗೆ ಅಥವಾ ಸರ್ಕಾರದ ಮುಂದಿನ ಆದೇಶ ಬರುವ ತನಕ ಫಲಾನುಭವಿ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಯೋಜನೆಯನ್ನು ಮುಂದುವರಿಸುವಂತೆ ತಿಳಿಸಿದೆ.

ಇಲಾಖೆಯಲ್ಲಿರುವ ಅನುದಾನದ ಆಧಾರದಲ್ಲಿ ಸದ್ಯದ ಮಟ್ಟಿಗೆ ಮೊಟ್ಟೆ ವಿತರಿಸಲಾಗುತ್ತಿದೆ. ಹೊಸ ಸರ್ಕಾರವು ಜು.7ರಂದು ಬಜೆಟ್ ಮಂಡಿಸಲಿದೆ. ಅದಾದ ನಂತರ ಬಜೆಟ್‌ನಲ್ಲಿ ಕೈಗೊಳ್ಳುವ ನಿರ್ಧಾರದಂತೆ ಇಲಾಖೆ ಮೊಟ್ಟೆ ವಿತರಣೆ ಮಾಡಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net