

ಗದಗ: ಕಾಂಗ್ರೆಸ್ನ ಐದು ಗ್ಯಾರಂಟಿಗಳ ಪೈಕಿ ಮೊದಲನೆಯದಾಗಿ ಜಾರಿಗೆ ಬಂದಿರುವ, ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ 'ಶಕ್ತಿ' ಯೋಜನೆ ಇದೀಗ ರಾಜ್ಯಾದ್ಯಂತ ನಕಾರಾತ್ಮಕ ಸಂಗತಿಗಳಿಂದಾಗಿಯೂ ಭಾರಿ ಸುದ್ದಿಯಲ್ಲಿದೆ.
ಉಚಿತ ಪ್ರಯಾಣದ ಅವಕಾಶದಿಂದ ಬಸ್ಗಳಲ್ಲಿ ವಿಪರೀತ ನೂಕುನುಗ್ಗಲು ಸೃಷ್ಟಿಯಾಗಿ ಬಸ್ ಡೋರ್ ಕಿತ್ತುಹೋಗಿದ್ದ ಪ್ರಕರಣ ನಡೆದಿದ್ದರೆ, ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಬಂದಿದ್ದ ಮಹಿಳೆಯರು ಬಸ್ನಲ್ಲೇ ಹೊಡೆದಾಟ ನಡೆಸಿದ ವಿಡಿಯೋ ಕೂಡ ಇಂದು ವೈರಲ್ ಆಗಿದೆ.
ಮಹಿಳೆಯರೇ ಬಸ್ನಲ್ಲಿ ತುಂಬಿಕೊಳ್ಳಲಾರಂಭಿಸಿದ್ದರಿಂದ ಶಾಲಾ ಮಕ್ಕಳ ಪ್ರಯಾಣಕ್ಕೂ ಅಡ್ಡಿಯಾದ ಪ್ರಕರಣಗಳು ವರದಿಯಾಗಿವೆ. ಮಹಿಳೆಯರ ಉಚಿತ ಪ್ರಯಾಣದ ಬಸ್ಗಳಲ್ಲಿ ಪುರುಷರಿಗೆ ಶೇ.50 ಆಸನಗಳ ಮೀಸಲು ಘೋಷಿಸಿದ್ದರೂ ಸುಲಭವಾಗಿ ಮೀಸಲು ಸೀಟು ಬಿಟ್ಟುಕೊಡದ ಮಹಿಳೆಯರಿಂದಾಗಿ ಪ್ರಯಾಣಿಕರ ನಡುವೆ ಬಸ್ನಲ್ಲಿ ವಾಗ್ವಾದ ನಡೆಯುತ್ತಿದೆ. ‘ಪುರುಷರಿಗಾಗಿ’ ಎಂದು ನಿಗಮದವರು ಬರೆಸದ ಕಾರಣ ಸೀಟು ಬಿಟ್ಟು ಕೊಡಿ ಎಂದು ಕೇಳಲು ಪುರುಷರಿಗೆ ಕಷ್ಟವಾಗುತ್ತಿದೆ. ಕೇಳಿದರೆ ‘ಪುರುಷರಿಗಾಗಿ’ ಅಂತ ಎಲ್ಲಿದೆ ಎಂಬ ಪ್ರಶ್ನೆಯೂ ಎದುರಾಗುತ್ತಿದೆ.
ಇದನ್ನೂ ಓದಿ: ಪುರುಷರ ಪ್ರಯಾಣ ಪ್ರಯಾಸ, ಮೀಸಲು ಆಸನ ಕೇಳದ ಸ್ಥಿತಿ!
ಇವೆಲ್ಲದರ ಜತೆಗೆ ಈಗ ಪುರುಷ ಪ್ರಯಾಣಿಕರಿಗೆ ಬಸ್ಗೆ ಹತ್ತುವುದು ಕೂಡ ಕಷ್ಟವಾಗಿ ಪರಿಣಮಿಸಿದೆ. ಬಸ್ ಬರುತ್ತಿದ್ದಂತೆ ಮಹಿಳೆಯರು ಡೋರ್ ಬಳಿ ಮುಗಿಬೀಳುವುದರಿಂದ ಪುರುಷರು ಬಸ್ಗೆ ಪ್ರವೇಶಿಸುವುದು ಕಷ್ಟಕರವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಇಂದು ಗದಗದಲ್ಲಿ ಪುರುಷ ಪ್ರಯಾಣಿಕರು ಕಿಟಕಿ ಮೂಲಕ ಬಸ್ಗೆ ಪ್ರವೇಶಿಸಬೇಕಾದ ಸನ್ನಿವೇಶ ಎದುರಾಗಿತ್ತು. ಡೋರ್ ಬಳಿ ಜಮಾಯಿಸಿದ ಮಹಿಳೆಯರನ್ನು ತಳ್ಳಿಕೊಂಡು ಒಳಹೋಗುವುದು ಇನ್ನೊಂದು ರೀತಿಯ ಸಮಸ್ಯೆಗೆ ಆಸ್ಪದ ನೀಡುವ ಸಾಧ್ಯತೆ ಇರುವುದರಿಂದ ಪುರುಷರು ಹೀಗೆ ಕಿಟಕಿ ಮೂಲಕ ಹತ್ತಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಕೆಲ ಪ್ರಯಾಣಿಕರು ಅಲವತ್ತುಕೊಂಡಿದ್ದಾರೆ.