ಅನಗತ್ಯವಾಗಿ ಮಹಾಪ್ರಾಣ ಪ್ರಯೋಗಿಸಬೇಡಿ..: ನಟ ಜಗ್ಗೇಶ್​ಗೆ 'ಮೇಷ್ಟ್ರ' ಕನ್ನಡ ಪಾಠ!

Jaggesh Nagathihalli
Published on

ಬೆಂಗಳೂರು: ಚಂದನವನದ ನವರಸ ನಾಯಕ, ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರು. ಆಗಾಗ ಯಾವುದಾದರೂ ಒಂದು ವಿಷಯದ ಬಗ್ಗೆ, ತಮ್ಮ ಜೀವನದ ಅಪ್​ಡೇಟ್ಸ್​ ಬಗ್ಗೆ ಟ್ವಿಟರ್​-ಫೇಸ್​ಬುಕ್​ಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಅವರು ಇತ್ತೀಚೆಗೆ ತಮ್ಮ ಕಾಲಿಗೆ ಪೆಟ್ಟಾದ ಬಗ್ಗೆಯೂ ಹೇಳಿಕೊಂಡಿದ್ದರು.

ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆದ ಬಳಿಕ ಕಾಲಿನ ಫೋಟೋ ತೆಗೆದು ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡಿ ತಮ್ಮ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದರು. 'ಸಣ್ಣ ಅಚಾತುರ್ಯ ನಡಿಗೆಯಿಂದ ಪಾದದ ಮೂಳೆ ಮುರಿತ! 6 ವಾರದ ದಿಘ್ಭಂಧನ ನಡಿಗೆಗೆ😭' ಎಂಬುದಾಗಿ ಆ ಫೋಟೋ ಜತೆ ಕ್ಯಾಪ್ಷನ್ ಹಾಕಿಕೊಂಡಿದ್ದರು.

ಜಗ್ಗೇಶ್ ಅವರ ಈ ಪೋಸ್ಟ್​ನಲ್ಲಿನ ತಪ್ಪನ್ನು ಗಮನಕ್ಕೆ ತರುವ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಮೇಷ್ಟ್ರು ಎಂದೇ ಕರೆಯಲಾಗುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಕಮೆಂಟ್ ಮಾಡಿದ್ದಾರೆ. 'ದಿಘ್ಭಂದನ ಅಲ್ಲ -ದಿಗ್ಬಂಧನ. ಅನಗತ್ಯವಾಗಿ ಮಹಾಪ್ರಾಣ ಪ್ರಯೋಗಿಸಬೇಡಿ. ಮೂಳೆ ಮುರಿತ ಬೇಗ ಗುಣವಾಗಲಿ. ಸಕ್ಕರೆ ರೋಗವಿದ್ದಲ್ಲಿ ಹೆಚ್ಚು ಜೋಪಾನ ವಹಿಸಿ. ಶುಭವಾಗಲಿ. ಪ್ರೀತಿಯಿಂದ- ನಾಗತಿಹಳ್ಳಿ ಚಂದ್ರಶೇಖರ' ಎಂಬುದಾಗಿ ಅವರು ಮಾಡಿರುವ ರಿಪ್ಲೈಗೆ ಬಹಳಷ್ಟು ಪ್ರತಿಕ್ರಿಯೆಗಳು ಬರಲಾರಂಭಿಸಿವೆ.

ಚಿತ್ರರಂಗದಲ್ಲಿ ಮೇಷ್ಟ್ರು ಎಂದೇ ಕರೆಯಲ್ಪಡುವ ನಾಗತಿಹಳ್ಳಿ ಚಂದ್ರಶೇಖರ್ ಅವರು, ಈ ಮೂಲಕ ನಿಜವಾಗಿಯೂ ಮೇಷ್ಟ್ರ ರೀತಿಯಲ್ಲಿ ಕನ್ನಡ ವ್ಯಾಕರಣದ ಕುರಿತು ಅರಿವು ಮೂಡಿಸುವ ಕೆಲಸ ಮಾಡಿದ್ದಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net