

ಬೆಂಗಳೂರು: ಇಂದು ಫಾದರ್ಸ್ ಡೇ.. ಹಲವರು ಅವರವರದೇ ರೀತಿಯಲ್ಲಿ ಫಾದರ್ಸ್ ಡೇ ವಿಷ್ ಮಾಡುವ, ತಂದೆಯನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ಇಂದು ಮಾಡಿದ್ದಾರೆ, ಮಾಡುತ್ತಿದ್ದಾರೆ. ಅದರಲ್ಲೂ ಇಲ್ಲೊಬ್ಬರು ನಟರು ವಿಶೇಷ ರೀತಿಯಲ್ಲಿ ಫಾದರ್ಸ್ ಡೇ ವಿಷ್ ಮಾಡಿದ್ದು, ಇದು ಬಹುತೇಕ ಎಲ್ಲರ ಪಾಲಿಗೂ ಸತ್ಯ ಎನಿಸುವಂಥ ಮಾತುಗಳಾಗಿವೆ.
'ಕಿರಿಕ್ ಪಾರ್ಟಿ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ..' ಮುಂತಾದ ಕನ್ನಡ ಸಿನಿಮಾಗಳ ಖ್ಯಾತಿಯ ಜನಪ್ರಿಯ ನಟ ಪ್ರಮೋದ್ ಶೆಟ್ಟಿ ಇಂದು ತಂದೆಯ ದಿನಕ್ಕೆ ವಿಶೇಷವಾದ ರೀತಿಯಲ್ಲಿ ಶುಭಾಶಯ ಕೋರಿ ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ತಂದೆಯ ದಿನದ ಕುರಿತು ಪದ್ಯೋಪಾದಿಯಲ್ಲಿ ಹಂಚಿಕೊಂಡ ಸಾಲುಗಳು ಹೀಗಿವೆ..
ನನ್ನಪ್ಪ ಒಬ್ಬ ಬೆಪ್ಪ...
ನಾನೇನು ಮಾಡಿದ್ರು ಕಾಣುತ್ತಿದ್ದ ಅದರಲಿ ತಪ್ಪ...
ಗಂಟಿಕ್ಕಿದ ಮೋರೆ, ಕೆಂಗಣ್ಣು, ಸಿಡುಕಿನ ಸಿದ್ದಪ್ಪ..
ನನ್ನ ಹಾರಾಟಕ್ಕೆಲ್ಲ ಸದಾ ಬ್ರೇಕ್ ಹಾಕ್ತಿದ್ನಪ್ಪ...
ಅನ್ನಿಸುತಿತ್ತು ನಾನು ಅಂದ್ರೆ ಇಷ್ಟನೇ ಇಲ್ವೇನಪ್ಪ..?
ಛೇ... ಮಕ್ಕಳನ್ನ ಪ್ರೀತಿಸೋಕೆ ಬರಲ್ಲ...
ನನ್ನಪ್ಪ ಅಪ್ಪ ಒಬ್ಬ ಬೆಪ್ಪ...
ಮಗನಾಗಿದ್ದ ನಾನು ಇದೀಗ ಆಗಿದ್ದೇನೆ ಅಪ್ಪ...
ಪದವಿಯಿದು.. ಇದನ್ನ ನೀನು ಹೇಗೆ ಸಂಭಾಳಿಸುತ್ತಿದ್ದೆಯಪ್ಪ..
ಬದುಕಲು ಆತ್ಮವಿಶ್ವಾಸ ಅರಿವಿಲ್ಲದೆ ನನ್ನಲ್ಲಿ ತುಂಬಿದವ ನೀನಪ್ಪ ..
ಅಂದು ನಾ ಎಣಿಸಿದ್ದೆ ನಿನ್ನ ತಪ್ಪ, ಇಂದು ನಾ ಎಲ್ಲವ ಒಪ್ಪಿದೆನಪ್ಪ...
ನಿನ್ನ ಜಾಗದಲ್ಲೇ ನಿಂತಾಗ, ನಿನ್ನ ನಾ ಅರಿತೆನಪ್ಪ...
ಯಾಕಂದ್ರೆ.. ನಾ ಇಂದು ಅಪ್ಪ...
ನನ್ನ ಮಕ್ಕಳ ಪಾಲಿಗೆ ಮುಂದೆ ನಾನು ಕೂಡ ಬೆಪ್ಪ....
- ಪ್ರಮೋದ್ ಶೆಟ್ಟಿ, ನಟ