ಕರೊನಾ ಸೋಂಕಿತರು ಸಾಕುಪ್ರಾಣಿಗಳಿಂದಲೂ ದೂರವಿರಬೇಕು!; ಇನ್ನೇನು ಹೇಳುತ್ತೆ ಈ ಅಧ್ಯಯನ?

Untitled-1
Published on

ನವದೆಹಲಿ: ಕೋವಿಡ್​-19 ಸೋಂಕಿತರು ಕೆಲವು ದಿನಗಳ ಮಟ್ಟಿಗೆ ಐಸೋಲೇಟ್ ಆಗಬೇಕು, ಉಳಿದವರಿಂದ ದೂರವಿರಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಹಾಗೂ ಅದು ಸದ್ಯಕ್ಕೆ ಪಾಲಿಸಲೇಬೇಕಾಗಿರುವ ಸರ್ವೇಸಾಮಾನ್ಯ ನಿಯಮ. ಆದರೆ ಇನ್ನು ಮನುಷ್ಯರು ಮಾತ್ರವಲ್ಲ, ಸಾಕುಪ್ರಾಣಿಗಳಿಂದಲೂ ಸೋಂಕಿತರು ದೂರವಿರಬೇಕು ಎಂಬ ನಿಯಮ ಜಾರಿಯಾದರೂ ಅಚ್ಚರಿ ಏನಲ್ಲ. ಏಕೆಂದರೆ ಕೆಲವೊಂದು ಕಡೆ ಅಂಥದ್ದೊಂದು ಮಾತು ಈಗಲೇ ಕೇಳಿಬಂದಿದೆ.

ಇತ್ತೀಚೆಗೆ ಕೋವಿಡ್​-19 ಸೋಂಕಿನ ಕುರಿತು ಅಧ್ಯಯನವೊಂದು ನಡೆದಿದ್ದು, ಕರೊನಾ ಸೋಂಕಿತರು ಸಾಕುಪ್ರಾಣಿಗಳಿಂದಲೂ ದೂರವಿರಬೇಕು ಎನ್ನುತ್ತಿದ್ದಾರೆ ಈ ಅಧ್ಯಯನ ಕೈಗೊಂಡಿರುವ ಪರಿಣತರು. ಯುಟ್ರೆಕ್ಟ್ ಯುನಿವರ್ಸಿಟಿ ಆಫ್​ ನೆದರ್ಲೆಂಡ್ಸ್​ ಇಂಥದ್ದೊಂದು ಅಧ್ಯಯನವನ್ನು ನಡೆಸಿದೆ.

ನೀವು ಕೋವಿಡ್ ಸೋಂಕಿತರಾಗಿದ್ದರೆ ಇತರರಿಂದ ದೂರವಿದ್ದಂತೆ ನಿಮ್ಮಲ್ಲಿ ಸಾಕಿರುವ ನಾಯಿ-ಬೆಕ್ಕುಗಳಿಂದಲೂ ದೂರವಿರಿ. ಅಂದರೆ ನಾವು ಪ್ರಾಣಿಗಳ ಯೋಗಕ್ಷೇಮದಿಂದಷ್ಟೇ ಇದನ್ನು ಹೇಳುತ್ತಿದ್ದೇವೆ ಎಂದಲ್ಲ. ನಿಜವಾದ ಕಾಳಜಿ ಏನೆಂದರೆ, ಈ ಪ್ರಾಣಿಗಳು ವೈರಸ್​ನ ಸಂಗ್ರಹಕೇಂದ್ರದಂತಿದ್ದು, ಕ್ರಮೇಣ ಬೇರೆ ರೀತಿಯಲ್ಲಿ ಮನುಷ್ಯರಿಗೆ ವೈರಸ್ ದಾಟಿಸುವಂತಾಗಬಹುದು ಎನ್ನುತ್ತಾರೆ ಯುಟ್ರೆಕ್ಟ್ ಯುನಿವರ್ಸಿಟಿಯ ಡಾ.ಎಲ್ಸ್ ಬ್ರೊಯೆನ್ಸ್. ತಾವು ಕೈಗೊಂಡಿರುವ ಅಧ್ಯಯನದ ವರದಿಯನ್ನು ಅವರು ಯುರೋಪಿಯನ್​ ಕಾಂಗ್ರೆಸ್​ ಆಫ್​ ಕ್ಲಿನಿಕಲ್ ಮೈಕ್ರೊಬಯಾಲಜಿ ಆ್ಯಂಡ್​ ಇನ್​ಫೆಕ್ಷಿಯಸ್ ಡಿಸೀಸಸ್​ನಲ್ಲಿ ಸಲ್ಲಿಸಿದ್ದಾರೆ.

ಈ ಅಧ್ಯಯನಕ್ಕೆಂದೇ ಒಂದು ಮೊಬೈಲ್​ ವೆಟರ್ನಿಟಿ ಕ್ಲಿನಿಕ್​ ಸಜ್ಜುಮಾಡಿಕೊಂಡು ಕೋವಿಡ್ ಸೋಂಕಿತರ ಮನೆಗಳಿಗೆ ತೆರಳಿ, ಅಲ್ಲಿದ್ದ ಪ್ರಾಣಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ನೆದರ್ಲೆಂಡ್ಸ್​ನಲ್ಲಿ ಕಳೆದ 200 ದಿನಗಳಲ್ಲಿ ಸೋಂಕಿಗೆ ಒಳಗಾಗಿದ್ದವರ ಮನೆಗೆ ತೆರಳಿ, ಅಲ್ಲಿನ ಸಾಕುಪ್ರಾಣಿಗಳ ಮೇಲೆ ಪರೀಕ್ಷೆ ನಡೆಸಲಾಗಿತ್ತು. 196 ಮನೆಗಳ 310 ಪ್ರಾಣಿಗಳ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಿದ್ದಾಗ 6 ಬೆಕ್ಕು ಹಾಗೂ 7 ನಾಯಿಗಳು ಕೋವಿಡ್​ ಪಾಸಿಟಿವ್ ಆಗಿರುವುದು ಕಂಡುಬಂದಿತ್ತು. ಮಾತ್ರವಲ್ಲ 54 ಸಾಕುಪ್ರಾಣಿಗಳಲ್ಲಿ ಕೋವಿಡ್​ ವೈರಸ್ ಆ್ಯಂಟಿಬಾಡೀಸ್​ ಇರುವುದು ಪತ್ತೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net