

ಕೋಲಾರ: ಕಾಫಿ ಮಾಡುವಾಗ ಸಂಭವಿಸಿದ್ದ ಗ್ಯಾಸ್ ಸ್ಫೋಟ ಅವಘಡದಲ್ಲಿ ಗಾಯಗೊಂಡಿದ್ದ ಗಂಡ-ಹೆಂಡತಿ ಇಬ್ಬರೂ ಸಾವಿಗೀಡಾಗಿದ್ದಾರೆ. ಕೋಲಾರದಲ್ಲಿ ಈ ಅವಘಡ ಸಂಭವಿಸಿದ್ದು, ದಂಪತಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುಪ್ಪಡಹಳ್ಳಿ ಗ್ರಾಮದಲ್ಲಿ ಸೆ. 16ರಂದು ಈ ದುರ್ಘಟನೆ ಸಂಭವಿಸಿತ್ತು. ಕೋಲಾರದ ಮಧುಸೂದನ್-ನಂದಿನಿ ಸಾವಿಗೀಡಾದ ದಂಪತಿ. ಕೋಲಾರ ತಾಲೂಕಿನ ಮಣಿಘಟ್ಟ ರಸ್ತೆಯಲ್ಲಿರುವ ಮಧುಸೂಧನ್ ತೋಟದ ಮನೆಯಲ್ಲಿ ಈ ಅವಘಡ ಉಂಟಾಗಿತ್ತು.
ಅಂದು ಕಾಫಿ ಮಾಡುವ ವೇಳೆ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿ, ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಗಂಡ-ಹೆಂಡತಿ ಇಬ್ಬರೂ ಸಾವಿಗೀಡಾದರು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.