

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲವರ್ ಇದ್ರಾ? ಸಿಎಂ ಯಾವತ್ತಾದ್ರೂ ಹೆಂಡ್ತಿಯಿಂದ ಬೈಸಿಕೊಂಡಿದ್ರಾ? ಮುಖ್ಯಮಂತ್ರಿಗೆ ಅಡುಗೆ ಮಾಡಲು ಬರುತ್ತಾ?
- ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಯಾರಾದರೂ ಕೇಳಲು ಸಾಧ್ಯವೇ? ಅದಾಗ್ಯೂ ಯಾರಾದರೂ ಕೇಳಿದರೆ ಹೇಗಿರಬಹುದು? ಹೀಗೆಲ್ಲ ಕೇಳಿದರೆ ಅವರ ಪ್ರತಿಕ್ರಿಯೆ, ಉತ್ತರ ಯಾವ ಥರ ಇರಬಹುದು?
ಖಂಡಿತ ಇಂಥ ಕುತೂಹಲ ಕೆಲವರಿಗಾದರೂ ಇದ್ದೇ ಇರುತ್ತದೆ. ಈ ಥರದ ಕುತೂಹಲಕಾರಿ ಸನ್ನಿವೇಶದಲ್ಲಿ ಖುದ್ದು ಸಿದ್ದರಾಮಯ್ಯ ಪಾಲ್ಗೊಂಡಿದ್ದಾರೆ. ಕಲರ್ಫುಲ್ ಯುವತಿಯರ ನಡುವೆ ಕುಳಿತ ಸಿದ್ದರಾಮಯ್ಯ ಅವರು ಇಂಥ ಪ್ರಶ್ನೆಗಳನ್ನು ತಮ್ಮ ಎಂದಿನ ಶೈಲಿಯಲ್ಲೇ ಎದುರಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್-2023 ಕಾರ್ಯಕ್ರಮ ಈ ಥರದ್ದೊಂದು ವೇದಿಕೆ ಸೃಷ್ಟಿಸಿದ್ದು, ಇದರಲ್ಲಿ ಸಿದ್ದರಾಮಯ್ಯ ಅವರನ್ನು ಕಿರುತೆರೆಯ ಕಣ್ಮಣಿಗಳು ಸಂದರ್ಶನ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮಾಮೂಲಿಯಾಗಿ ಎದುರಿಸುವಂಥ ಪ್ರಶ್ನೆಗಳಿಗೆ ವ್ಯತಿರಿಕ್ತವಾದ, ತಮಾಷೆಯಾದ, ಜನರಿಗೆ ತಿಳಿದುಕೊಳ್ಳಲು ಕುತೂಹಲ ಇರುವಂಥ ಈ ಪ್ರಶ್ನೆಗಳನ್ನು ಇಲ್ಲಿನ ಯುವತಿಯರು ಕೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲವರ್ ಇದ್ರಾ? ಸಿಎಂ ಯಾವತ್ತಾದ್ರೂ ಹೆಂಡ್ತಿಯಿಂದ ಬೈಸಿಕೊಂಡಿದ್ರಾ? ಮುಖ್ಯಮಂತ್ರಿಗೆ ಅಡುಗೆ ಮಾಡಲು ಬರುತ್ತಾ? ಎಂದೆಲ್ಲ ಕೇಳಿರುವ ಪ್ರಶ್ನೆಗಳಿಗೆ ಸಿಎಂ ಏನು ಉತ್ತರ ನೀಡಿರಬಹುದು ಎಂಬ ಕುತೂಹಲ ನಾಡಿದ್ದರಿಂದಲೇ ತಣಿಯಲಿದೆ. ಅರ್ಥಾತ್, ಈ ಸಂದರ್ಶನವು ಸೆ.22, 23, 24ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 7ರಿಂದ ಪ್ರಸಾರವಾಗಲಿದೆ.