ಕಾವೇರಿ ಪರ ಕೂಗಿಗೆ ದನಿಗೂಡಿಸಿದ ಉಪೇಂದ್ರ; ಉಪ್ಪಿ ಆಶಯ ಏನು?

Upendra (5)
Published on

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುವ ಅನಿವಾರ್ಯತೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಡಳಿತಾತ್ಮಕವಾಗಿ ನಡೆಸಬಹುದಾದ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ ಕನ್ನಡ ಚಲನಚಿತ್ರರಂಗದ ಸ್ಟಾರ್​ ನಟರು ಕೂಡ ಈ ವಿಚಾರವಾಗಿ ದನಿ ಎತ್ತಿದ್ದಾರೆ.

ಇಂದು ಸೆಂಚುರಿ ಸ್ಟಾರ್ ಶಿವರಾಜಕುಮಾರ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟಿ ಪೂಜಾ ಗಾಂಧಿ ಹಾಗೂ ನಿನ್ನೆ ನಟ ಜಗ್ಗೇಶ್ ಕಾವೇರಿ ಪರವಾಗಿ ಮಾತನಾಡಿದ್ದರು. ಈ ಸಮಸ್ಯೆಯ ಪರಿಹಾರಕ್ಕೆ ಸೂಕ್ತ ಕ್ರಮ ಜರುಗಬೇಕು, ಇದಕ್ಕಾಗಿ ನಾವು ಯಾವತ್ತೂ ಕನ್ನಡಿಗರೊಂದಿಗೆ ಇದ್ದೇವೆ ಎಂದು ಹೇಳಿಕೊಂಡಿದ್ದರು. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಕೂಡ ಕಾವೇರಿ ಪರ ಕೂಗಿಗೆ ದನಿಗೂಡಿಸಿದ್ದಾರೆ.

ಈಗಾಗಲೇ ಸರಿಯಾಗಿ ಮಳೆಯಾಗದೆ ನೀರಿನ ಅಭಾವ ಸಾಕಷ್ಟು ಇರುವುದರಿಂದ ಕಾವೇರಿ ನೀರಿನ ಹಂಚಿಕೆಯ ವಿಷಯದಲ್ಲಿ ನಮ್ಮ ರೈತಾಪಿ ಬಾಂಧವರಿಗೆ ಸಮಸ್ಯೆ ಆಗದಂತೆ ತಜ್ಞರು ನಿರ್ಣಯ ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದಿರುವ ಉಪೇಂದ್ರ, ನಮ್ಮ ರೈತರ ನೀರಿನ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನೂ ಆದಷ್ಟು ಬೇಗ ತಜ್ಞರು ಹುಡುಕಿ ಕಾರ್ಯರೂಪಕ್ಕೆ ತರಲಿ ಎಂದು ಆಶಿಸೋಣ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಮುಂದೆಂದೂ ಇಂಥ ಸಮಸ್ಯೆ ತಲೆದೋರದಂಥ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಅವರು ಆಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net