ಲಖನೌ: ಪ್ರಕರಣ ಒಂದನ್ನು ಇತ್ಯರ್ಥಪಡಿಸಲು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ಐದು ಕೆಜಿ ಆಲೂಗಡ್ಡೆಯನ್ನು ಲಂಚವಾಗಿ ಕೇಳಿ ಅಮಾನತಾಗಿರುವ ಘಟನೆ ಉತ್ತರಪ್ರದೇಶದ ಕನೌಜ್ನಲ್ಲಿ ನಡೆದಿದೆ.
ಅಮಾನತಾದ ಅಧಿಕಾರಿಯ ಹೆಸರು ರಾಮ್ಕೃಪಾಲ್ ಸಿಂಗ್ ಎಂದು ತಿಳಿದು ಬಂದಿದ್ದು, ಇವರು ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಮಾನತಾದ ಅಧಿಕಾರಿಯು ಲಂಚಕ್ಕಾಗಿ ಆಲೂಗಡ್ಡೆ ಎಂಬ ಪದವನ್ನು ಬಳಸುತ್ತಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ವಯನಾಡು ದುರಂತ; ಸಹಾಯಹಸ್ತ ಚಾಚುವಂತೆ ರಾಜ್ಯದ ಉದ್ಯಮಿಗಳಿಗೆ ಮನವಿ ಮಾಡಿದ ಸಚಿವ ಎಂ.ಬಿ. ಪಾಟೀಲ್
ವೈರಲ್ ಆಗಿರುವ ಆಡಿಯೋ ಕೇಳುವುದಾದರೆ ಪೊಲೀಸ್ ಅಧಿಕಾರಿಯೂ ರೈತರೊಬ್ಬರ ವ್ಯಾಜ್ಯವನ್ನು ಇತ್ಯರ್ಥಪಡಿಸಲು 5 ಕೆಜಿ ಆಲೂಗಡ್ಡೆ ಬೇಕೆಂಡು ಹೇಳುತ್ತಾರೆ. ಇದಕ್ಕೆ ಒಪ್ಪದ ರೈತ ಎರಡು ಕೆಜಿ ಕೊಡುವುದಾಗಿ ಹೇಳುತ್ತಾನೆ. ಆದರೆ, ರೈತನ ಮಾತಿಗೆ ಕೋಪಗೊಳ್ಳುವ ಅಧಿಕಾರಿ 5 ಕೆಜಿ ಆಲೂಗಡ್ಡೆ ಬೇಕೆಂದು ಪಟ್ಟು ಹಿಡಿಯುತ್ತಾರೆ. ಅಂತಿಮವಾಗಿ 3 ಕೆಜಿ ಆಲೂಗಡ್ಡೆಯನ್ನು ಕಳಿಸಿಕೊಡುವಂತೆ ಹೇಳಿ ಪೋನ್ ಕಾಲ್ ಕಟ್ ಮಾಡುತ್ತಾರೆ.
ಇತ್ತ ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಆನಂದ್ ರಾಮ್ಕೃಪಾಲ್ ಸಿಂಗ್ ಅವರನ್ನು ಅಮಾನತು ಮಾಡಿದ್ದು, ತನಿಖೆಗೆ ಆದೇಶಿಸಿದ್ದಾರೆ. ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್‌ಪುರ ಚಾಪುನ್ನಾ ಚೌಕಿಯಲ್ಲಿ ನಿಯೋಜನೆಗೊಂಡಿದ್ದ ಸಬ್‌ಇನ್‌ಸ್ಪೆಕ್ಟರ್‌ನನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆಯನ್ನು ಹೊರಡಿಸಿದ್ದಾರೆ.