ಬೆಂಗಳೂರು: 410ಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ ವಯನಾಡು ಭೂ ದುರಂತ .ಕೇರಳದಲ್ಲಿ ಸಂಭವಿಸಿದ ಅತ್ಯಂತ ಭೀಕರ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ. ಭೂಕುಸಿತದಲ್ಲಿ ಸಾವಿರಾರು ಜನರು ನಿರಾಶ್ರಿತರು ಕುಟುಂಬಸ್ಥರು, ಮನೆ ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿ ನಿಂತಿದ್ದಾರೆ. ಇವರ ಕಥೆಯೂ ಮನಕಲುಕುತ್ತಿದ್ದು, ಸಾರ್ವಜನಿಕರು ಹಾಗೂ ಸರ್ಕಾರಗಳು ಇವರ ನೆರವಿಗೆ ಧಾವಿಸುತ್ತಿವೆ. ಈ ಹಿಂದೆ ಕರ್ನಾಟಕ ಸರ್ಕಾರ ನಿರಾಶ್ರಿತರಿಗೆ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿತ್ತು. ಅದೇ ರೀತಿ ಇದೀಗ ಸಚಿವ ಎಂ.ಬಿ. ಪಾಟೀಲ್ ರಾಜ್ಯದ ಕೈಗಾರಿಕೋದ್ಯಮಿಗಳು ಧಾವಿಸಿ, ಸಹಾಯಹಸ್ತ ಚಾಚಬೇಕು ಎಂದು ಮನಬಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಸಚಿವ ಎಂ.ಬಿ. ಪಾಟೀಲ್, ಕಂಡುಕೇಳರಿಯದ ಭೂಕುಸಿತದಿಂದ ನಲುಗಿರುವ ಕೇರಳದ ವಯನಾಡು ಜನತೆಯ ನೆರವಿಗೆ ರಾಜ್ಯದ ಕೈಗಾರಿಕೋದ್ಯಮಿಗಳು ಧಾವಿಸಿ, ಸಹಾಯಹಸ್ತ ಚಾಚಬೇಕು. ಈ ಸಂಬಂಧ ಯಾವುದೇ ಮಾಹಿತಿ/ಮಾರ್ಗದರ್ಶನ ಬೇಕಾದಲ್ಲಿ ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಅವರನ್ನು ದೂರವಾಣಿ ಸಂಖ್ಯೆ 080-22386796 ಅಥವಾ ಇಮೇಲ್ ಮೂಲಕ [email protected] ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ವಯನಾಡು ದುರಂತದಲ್ಲಿ 412 ಮಂದಿ ಜೀವ ಕಳೆದುಕೊಂಡಿದ್ದು, ಇನ್ನೂ 138 ಜನ ಕಣ್ಮರೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಉದ್ಯಮಲೋಕವು ಮಾನವೀಯತೆಯನ್ನು ಎತ್ತಿ ಹಿಡಿಯಬೇಕಾಗಿದೆ. ಉದ್ಯಮಿಗಳು ಸಂತ್ರಸ್ತರ ಪುನರ್ವಸತಿ, ಅಗತ್ಯ ವಸ್ತುಗಳ ಪೂರೈಕೆ, ಮನೆಗಳ ಪುನರ್ನಿರ್ಮಾಣ, ಮೂಲಸೌಕರ್ಯ, ಜೀವನೋಪಾಯಕ್ಕೆ ನೆರವು, ವೈದ್ಯಕೀಯ ನೆರವು ಹೀಗೆ ಯಾವ ರೂಪದಲ್ಲಾದರೂ ಸಹಾಯ ಮಾಡಬಹುದು. ನೆರೆಯ ರಾಜ್ಯವು ಈಗ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ತತ್ತರಿಸಿದೆ. ಆ ರಾಜ್ಯಕ್ಕೆ ನೆರವು ನೀಡಲು ಕರ್ನಾಟಕ ಸರಕಾರ ಬದ್ಧವಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.