ಬಾಂಗ್ಲಾ ಬಿಕ್ಕಟ್ಟು; ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆದರಿ ಮುಖ್ಯ ನ್ಯಾಯಮೂರ್ತಿ ರಾಜೀನಾಮೆ

Bangla Chief Justice
Published on

ಡಾಕಾ: ಮಾಜಿ ಸೈನಿಕರ ಕುಟುಂಬದವರಿಗೆ ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಸಂಘಟನೆಗಳು ಆರಂಭಿಸಿದ ಪ್ರತಿಭಟನೆಗೆ ನಲುಗಿ ಶೇಖ್​ ಹಸೀನಾ ರಾಜೀನಾಮೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿದ್ದರು. ಶೇಖ್​ ಹಸೀನಾ ಬೆನ್ನಲ್ಲೇ ಇದೀಗ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ರಾಜೀನಾಮೆ ನೀಡಿದ್ದಾರೆ.

ಢಾಕಾದಲ್ಲಿ ಸುಪ್ರೀಂಕೋರ್ಟ್ ಆವರಣವನ್ನು ಆಕ್ರಮಿಸಿದ ವಿದ್ಯಾರ್ಥಿಗಳು, ವಕೀಲರು ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರನ್ನೊಳಗೊಂಡ ಪ್ರತಿಭಟನಾಕಾರರು, ಒಬೈದುಲ್​ ಹಸನ್​ ಮತ್ತು ಮೇಲ್ಮನವಿ ವಿಭಾಗದ ಇತರ ನ್ಯಾಯಾಧೀಶರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸಲು ಶುರು ಮಾಡಿದರು. ಇದರ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ಒಬೈದುಲ್ ಹಸನ್ ಅವರು ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಿಷ್ಠಾವಂತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು, ವಕೀಲರು ಹಾಗೂ ಅನೇಕ ಸಂಘಟನೆಗಳ ಸದಸ್ಯರು ಸುಪ್ರೀಂ ಕೋರ್ಟ್​ ಆವರಣದಲ್ಲಿ ಪ್ರತಿಭಟನೆ ನಡೆಸಲು ಶುರು ಮಾಡಿದರು. ಇದಲ್ಲದೆ ರಾಜೀನಾಮೆ ನೀಡಲು ಒಂದು ಗಂಟೆ ಸಮಯಾವಕಾಶ ನೀಡಿದ್ದರು.

ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರನ್ನು ಭೇಟಿಯಾದ ನಂತರ ರಾಜೀನಾಮೆ ಸಲ್ಲಿಸಿದ್ದಾರೆ. ಶನಿವಾರ ಮಧ್ಯಾಹ್ನ ಬೃಹತ್ ಪ್ರತಿಭಟನಾಕಾರರು ನ್ಯಾಯಾಲಯದ ಆವರಣಕ್ಕೆ ಮುತ್ತಿಗೆ ಹಾಕಿದ ನಂತರ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಹಿಂದಿನ ದಿನ, ಮಧ್ಯಂತರ ಸರ್ಕಾರದ ಯುವ ಮತ್ತು ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ಮಹಮೂದ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ಅವರ ಬೇಷರತ್ ರಾಜೀನಾಮೆಗೆ ಒತ್ತಾಯಿಸಿದರು.

ಬಾಂಗ್ಲಾದೇಶ ಬ್ಯಾಂಕ್ ಗವರ್ನರ್ ಅಬ್ದುರ್ ರೂಫ್ ತಾಲೂಕ್ದರ್ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ರಾಜೀನಾಮೆ ಸಲ್ಲಿಸಿದ್ದಾರೆ. ಈಚೆಗೆ ಮೀಸಲಾತಿ ನೀತಿ ವಿರೋಧಿಸಿ ದೇಶದಾದ್ಯಂತ ನಡೆದ ಹಿಂಸಾಚಾರದ ಬೆನ್ನಲ್ಲೇ, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶೇಖ್‌ ಹಸೀನಾ ಅವರು ದೇಶ ತೊರೆದಿದ್ದರು. ಬಳಿಕ ಮೊಹಮ್ಮದ್ ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net