

ಲಖನೌ: ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ, ತಿದ್ದಿ ಬುದ್ದಿ ಹೇಳಿ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಿ ಮಾದರಿಯಾಗಬೇಕಾಗಿರುವ ಶಿಕ್ಷಕರೇ ಹಾದಿ ತಪ್ಪಿದರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಈ ಪ್ರಕರಣವೇ ಜೀವಂತ ಸಾಕ್ಷಿಯಾಗಿದೆ. ಉತ್ತರಪ್ರದೇಶದ ಉನ್ನಾವೋದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಟೆಂಡೆನ್ಸ್ ಮಾರ್ಕ್ ಮಾಡಬೇಕೆಂದರೆ ನನ್ನ ಕೆನ್ನೆಗೆ ಮುತ್ತನ್ನು ಕೊಡು ಎಂದು ಸರ್ಕಾರಿ ಶಾಲೆಯ ಪ್ರಾಂಶುಪಾಲ ಶಿಕ್ಷಕಿಗೆ ಬೇಡಿಕೆ ಇಟ್ಟಿದ್ದಾನೆ. ಪ್ರಾಂಶುಪಾಲನ ಈ ನಾಚಿಕೆಗೇಡಿನ ಕೆಲಸವನ್ನು ಶಿಕ್ಷಕಿ ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ. ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ತನಿಖೆಗೆ ಆದೇಶಿಸಿರುವ ಶಿಕ್ಷಣ ಇಲಾಖೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಪ್ರಾಂಶುಪಾಲನ ಕೊಠಡಿ ಪ್ರವೇಶಿಸುವ ಶಿಕ್ಷಕಿ ಅಟೆಂಡೆನ್ಸ್ ಬೇಕೆಂದು ಕೇಳುತ್ತಾರೆ. ಅಟೆಂಡೆನ್ಸ್ ಕೊಡಬೇಕೆಂದರೆ ನನ್ನದೊಂದು ಕಂಡೀಷನ್ ಇದೆ ಎಂದು ಹೇಳುತ್ತಾರೆ. ಅದಕ್ಕೆ ಒಪ್ಪಿಗೆ ನೀಡಿದರೆ ಫುಲ್ ಅಟೆಂಡೆಸ್ ಕೊಡುವೆ ಎಂದು ಹೇಳುತ್ತಾರೆ. ಏನದು ಕಂಡೀಷನ್ ಎಂದು ಕೇಳಿದಾಗ ಆತ ನನ್ನ ಕೆನ್ನೆಗೆ ಮುತ್ತು ಕೊಡಬೇಕೆಂದು ಹೇಳುತ್ತಾರೆ. ಇದಕ್ಕೆ ಒಪ್ಪದ ಶಿಕ್ಷಕಿ ಪ್ರಾಂಶುಪಾಲನ ಕೊಠಡಿಯಿಂದ ಎದ್ದು ಬಂದಿದ್ದಾರೆ.
ಮಮತಾ ತ್ರಿಪಾಠಿ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, 1.7 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಶಿಕ್ಷಕರು ತಮ್ಮ ಘನತೆಯನ್ನು ಮರೆತಾಗ ವಿದ್ಯಾರ್ಥಿಗಳ ಭವಿಷ್ಯ ಏನಾಗಬಹುದು, ಆ ಶಿಕ್ಷಕಿ ಪ್ರತಿಕ್ರಿಯೆ ನೀಡುವ ಬದಲು ಆತನ ಕೆನ್ನೆಗೆ ಬಾರಿಸಬೇಕಿತ್ತು, ಇಂತಹವರನ್ನು ಕೂಡಲೇ ಕೆಲಸದಿಂದ ತೆಗೆದು ಹಾಕಿ ಎಂದು ನೆಟ್ಟಿಗರು ಕಮೆಂಟ್ ಹಾಕಿ ಕಿಡಿಕಾರಿದ್ದಾರೆ.