ನವದೆಹಲಿ: ಪ್ಯಾರಿಸ್ ಆತಿಥ್ಯದಲ್ಲಿ ನಡೆದ 33ನೇ ಆವೃತ್ತಿಯ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುತ್ತಾರೆ ಎಂದು ಎಲ್ಲರೂ ಭಾವಿಸಿದ್ದರೂ. ಫೈನಲ್‌ನಲ್ಲಿ ಎಡವಿದ ನೀರಜ್ 89.45 ಮೀಟರ್ ಜಾವೆಲಿನ್ ಎಸೆದು ಎರಡನೇ ಸ್ಥಾನ ಪಡೆದು ಬೆಳ್ಳಿ ಗೆದ್ದರು. ಕಳೇದ ಬಾರಿ ಟೋಕಿಯೋ ಆತಿಥ್ಯದಲ್ಲಿ ನಡೆದ ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದ ನೀರಜ್ ಈ ಬಾರಿಯೂ ಗೋಲ್ಡ್ ಮೆಡಲ್ ಗೆಲ್ಲಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಬಾರಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ನೀರಜ್ 89.45 ಮೀಟರ್ ಎಸೆದರೆ, ಅರ್ಷದ್ ನದೀಮ್ 92.97 ಮೀಟರ್ ಎಸೆದು ದಾಖಲೆ ಬರೆಯುವ ಮೂಲಕ ಚಿನ್ನದ ಪದಕ ಗೆದ್ದರು. ಮೊದಲ ಪ್ರಯತ್ನದಲ್ಲಿ ಇಬ್ಬರೂ ಫೌಲ್ ಆದರು. ಇದನ್ನು ಎರಡನೇ ಪ್ರಯತ್ನದಲ್ಲಿ ಸಾಧಿಸಿದರು. ಇನ್ನೂ ಬೆಳ್ಳಿ ಪದಕ ಗೆದ್ದಿರುವ ಸಂಭ್ರಮದಲ್ಲಿರುವ ನೀರಜ್ ಚೋಪ್ರಾ ಈ ಕುರಿತು ಮಾತನಾಡಿದ್ದು, ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ನಂತರ ಭಾರತದಲ್ಲೂ ಜನರು ಪ್ರಧಾನಿ ವಿರುದ್ಧ ದಂಗೆ ಏಳುತ್ತಾರೆ: ಕಾಂಗ್ರೆಸ್ ನಾಯಕ ಸಜ್ಜನ್ ಸಿಂಗ್
ನಾನು ಏನನ್ನೂ ಹೇಳುವುದಿಲ್ಲ. ಕಳೆದ ಬಾರಿಯಂತೆ ರಾಷ್ಟ್ರಗೀತೆ ಈ ಬಾರಿ ನುಡಿಸಲಿಲ್ಲ. ನಾನು ಅಂದುಕೊಂಡು ಹೋದದ್ದೆ ಬೇರೆ ಆದರೆ, ಅಲ್ಲಿ ಆದದ್ದೆ ಬೇರೆ. ದೇಶಕ್ಕಾಗಿ ಪದಕ ಗೆಲ್ಲುವುದು ಕೈಯಲ್ಲಿ ಧ್ವಜ ಹಿಡಿದು ಮೈದಾನದ ಸುತ್ತ ಓಡುವುದು ವಿಭಿನ್ನ ಭಾವನೆಯಾಗಿದ್ದು, ಬೆಳ್ಳಿ ಪದಕ ಗೆದ್ದಿದ್ದು ಖುಷಿ ನೀಡಿದೆ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ನೀರಜ್ ಚೋಪ್ರಾ, ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಇತಿಹಾಸ ಹೊಂದಿದ್ದಾರೆ. 92.97 ಮೀಟರ್ ಎಸೆದು ನೂತನ ಒಲಿಂಪಿಕ್ ದಾಖಲೆ ನಿರ್ಮಿಸುವ ಮೂಲಕ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದ ಪಾಕಿಸ್ತಾನದ ಅರ್ಷದ್ ನದೀಮ್ಗೆ ಎಲ್ಲೆಡೆಯಿಂದ ಅಭಿನಂದನೆಗಳ ಸುರಿಮಳೆಯೇ ಹರಿದುಬಂದಿದೆ. ಅಂದಹಾಗೆ ಪಾಕಿಸ್ತಾನಕ್ಕೆ 32 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕವೊಂದು ದೊರಕಿದ್ದು ಇತಿಹಾಸ.