ಚೆನ್ನೈ: ಮರ್ಯಾದ ಹತ್ಯೆ ಅಪರಾಧವಲ್ಲ, ಅದು ಪಾಲಕರು ತಮ್ಮ ಮಕ್ಕಳ ಮೇಲಿಟ್ಟಿರುವ ಪ್ರೀತಿಗೆ ಸಾಕ್ಷಿ ಎಂದು ತಮಿಳಿನ ಖ್ಯಾತ ನಟ, ನಿರ್ದೇಶಕ ರಂಜಿತ್ ನೀಡಿರುವ ಹೇಳಿಕೆ ಹೊಸ ವಿವಾದವನ್ನು ಹುಟ್ಟುಹಾಕಿದೆ. ನಟನ ಹೇಳಿಕೆ ಬಗ್ಗೆ ಹಲವರು ಕಿಡಿಕಾರಿದ್ದು, ಇವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಂಹಿತ್ ನಟಿಸಿ, ನಿರ್ದೇಶಿಸಿರುವ ಕವುಂದಂಪಾಲಾಯಂ ಸಿನಿಮಾವು ಆಗಸ್ಟ್ 09ರಂದು ಬಿಡುಗಡೆಯಾಗಿದ್ದು, ಕರಪ್ಪೂರ್ನಲ್ಲಿ ಪ್ರೇಕ್ಷಕರೊಂದಿಗೆ ಸಿನಿಮಾವನ್ನು ವೀಕ್ಷಿಸಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ರಂಜಿತ್ ಮರ್ಯಾದ ಹತ್ಯೆ ಕುರಿತು ಹೇಳಿಕೆ ನೀಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಇದನ್ನೂ ಓದಿ: ಬಾಂಗ್ಲಾ ಬಿಕ್ಕಟ್ಟು; ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆದರಿ ಮುಖ್ಯ ನ್ಯಾಯಮೂರ್ತಿ ರಾಜೀನಾಮೆ
ಸಿನಿಮಾ ವೀಕ್ಷಿಸಿದ ಬಳಿಕ ಮರ್ಯಾದ ಹತ್ಯೆ ಕುರಿತು ಮಾತನಾಡಿದ ನಟ, ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಮಕ್ಕಳು ಅನ್ಯ ಜಾತಿಯವರನ್ನು ಮದುವೆಯಾದಾಗ ಆದ ನೋವು ಪಾಲಕರಿಗೆ ಮಾತ್ರ ಗೊತ್ತು. ಒಂದು ವಸ್ತು ಕಳೆದುಹೋದರೆ ಏನಾಯಿತು ಅಂತ ನಾವು ನೋಡಲು ಹೋಗುವುದಿಲ್ಲವೇ. ಅದೇ ರೀತಿ ತಂದೆ-ತಾಯಿಗಳಿಗೆ ಮಕ್ಕಳು ಕಾಣದಿದ್ದರೆ ನೋವಾಗುವುದಿಲ್ಲವೇ. ಮಕ್ಕಳನ್ನೇ ಜೀವನ ಎಂದುಕೊಂಡ ಪಾಲಕರು ಕೂಡ ಸಿಟ್ಟು ತೋರಿಸುತ್ತಾರೆ. ಅದು ಹಿಂಸೆ ಅಲ್ಲವೇ ಅಲ್ಲ. ಮಕ್ಕಳ ಬಗ್ಗೆ ಅವರು ತೋರಿಸುವ ಪ್ರೀತಿ ಎಂದು ನಟ, ನಿರ್ದೇಶಕ ರಂಜಿತ್ ಹೇಳಿದ್ದಾರೆ.
ನಟ, ನಿರ್ದೇಶಕ ರಂಜಿತ್ ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮಹಿಳೆಯರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದ ರಂಜಿತ್ ಇದೀಗ ಮರ್ಯಾದೆ ಹತ್ಯೆ ಕುರಿತು ನೀಡಿರುವ ಹೇಳಿಕೆ ಅನೇಕರ ಕಣ್ಣು ಕೆಂಪಗಾಗಿಸಿದೆ. ನೀವು ತಪ್ಪಾದ ಹೇಳಿಕೆಯನ್ನು ನೀಡುತ್ತಿಲ್ಲ. ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದೀರಿ. ಇದು ಅಪಾಯಕಾರಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.