ಪ್ಯಾರಿಸ್: ಫ್ರಾನ್ಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಕುಸ್ತಿ ವಿಭಾಗದಲ್ಲಿ ಭಾರತದ ಕುಸ್ತಿಪಟು ರಿತಿಕಾ ಹೂಡಾ ದಿಟ್ಟ ಹೋರಾಟದ ನಡುವೆಯೂ ಸೆಮಿಫೈನಲ್ಗೆ ಲಗ್ಗೆ ಇಡುವಲ್ಲಿ ವಿಫಲರಾಗಿದ್ದಾರೆ.
ಮಹಿಳೆಯರ 76 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಿರ್ಗಿಸ್ತಾನದ ಐಪೆರಿ ಮೆಡೆಟ್ ಕಿಝಿ ವಿರುದ್ಧ ನಡೆದ ಸೆಣಸಾಟದಲ್ಲಿ ಆರು ನಿಮಿಷಗಳವರೆಗೂ ರಿತಿಕಾ 1-1ರ ಅಂತರದ ಸಮಬಲ ಸಾಧಿಸಿದರು. ಇಬ್ಬರೂ ಕುಸ್ತಿಪಟುಗಳು ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಒತ್ತು ನೀಡಿದರು. ಆದರೆ, ನಿಯಮದ ಅನ್ವಯ ಮೆಡೆಟ್ ಮೇಲುಗೈ ಸಾಧಿಸಿ ಮುಂದಿನ ಹಂತಕ್ಕೆ ತೇರ್ಗಡೆ ಪಡೆದರು.
ಒಂದು ವೇಳೆ ಮೆಡೆಟ್ ಅವರು ಫೈನಲ್ ಪ್ರವೇಶಿಸಿದ್ದಲ್ಲಿ ರಿತಿಕಾ ಅವರಿಗೆ ರೆಪಷಾಜ್ ಸುತ್ತಿನಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ. ಈ ಮೊದಲು ಮೊದಲ ಸುತ್ತಿನಲ್ಲಿ ರಿತಿಕಾ ಅವರು ಹಂಗೇರಿಯ ಬರ್ನಾಡೆಟ್ ನ್ಯಾಗಿ ವಿರುದ್ಧ 12-2ರ ಅಂತರದಲ್ಲಿ ಗೆದ್ದರು. ಪುರುಷರ ಕುಸ್ತಿ ವಿಭಾಗದಲ್ಲಿ ಭಾರತದ ಏಕಮಾತ್ರ ಸ್ಪರ್ಧಿಯಾಗಿದ್ದ ಅಮನ್ ಸೆಹ್ರಾವತ್, ಶುಕ್ರವಾರ ಕಂಚಿನ ಪದಕಕ್ಕೆ ಮುತ್ತಿಟ್ಟರು.