ಸಕ್ಕರೆ ಖಾಯಿಲೆ ಕುರಿತಾದ `ಶುಗರ್ಲೆಸ್' ... ಸೆಪ್ಟೆಂಬರ್ ನಿಂದ ಪ್ರಾರಂಭ

Sugarless - Final
Published on

ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಹಲವು ಖಾಯಿಲೆಗಳ ಕುರಿತಾಗಿ ಹಲವು ಸಿನಿಮಾಗಳು ಬಂದಿವೆ. ಆದರೆ, ಡಯಾಬಿಟೀಸ್ ಕುರಿತಾಗಿ ಇದುವರೆಗೂ ಯಾರೂ ಚಿತ್ರ ಮಾಡುವ ಪ್ರಯತ್ನ ಮಾಡಿರಲಿಲ್ಲ. ಈ ಹಿಂದೆ `ಡಾಟರ್ ಆಫ್ ಪಾರ್ವತಮ್ಮ' ಚಿತ್ರವನ್ನು ನಿರ್ಮಿಸಿದ್ದ ಮತ್ತು ಇದೀಗ ಪ್ರಜ್ವಲ್ ಅಭಿನಯದ `ವೀರಂ' ಚಿತ್ರವನ್ನು ನಿರ್ಮಿಸುತ್ತಿರುವ ಶಶಿಧರ್, ಕೆಲವು ದಿನಗಳ ಹಿಂದೆ ಡಯಾಬಿಟೀಸ್ ಕುರಿತಾಗಿ ಒಂದು ಚಿತ್ರ ಮಾಡುವುದಾಗಿ ಹೇಳಿದ್ದರು.

ಅದೀಗ ಕಾರ್ಯರೂಪಕ್ಕೆ ತಂದಿದ್ದಾರೆ. ಒಬ್ಬ ಯುವಕನಿಗೆ ಡಯಾಬಿಟೀಸ್ ಬಂದರೆ ಏನಾಗುತ್ತದೆ ಮತ್ತು ಅದು ಅವನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ತಮಾಷೆಯಾಗಿ ತಮ್ಮ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದಾರೆ. ಅಂದಹಾಗೆ, ಈ ಚಿತ್ರದ ಹೆಸರೇನು ಗೊತ್ತಾ? `ಶುಗರ್‍ಲೆಸ್'.

`ಶುಗರ್‍ಲೆಸ್' ಚಿತ್ರವನ್ನು ಶಶಿಧರ್ ನಿರ್ಮಿಸುತ್ತಿರುವುದಷ್ಟೇ ಅಲ್ಲ, ಕಥೆ-ಚಿತ್ರಕಥೆ ಬರೆದು ನಿರ್ದೇಶನವನ್ನೂ ಸಹ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರಕಥೆ ಮಾಡಿಟ್ಟುಕೊಂಡಿರುವ ಅವರು, ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಯೋಚಿಸುತ್ತಿದ್ದಾರೆ.

ಈ ಕುರಿತು `ವಿಜಯವಾಣಿ'ಯೊಂದಿಗೆ ಮಾತನಾಡಿದ ಅವರು, `ಈಗಾಗಲೇ ಚಿತ್ರಕಥೆ ಕೆಲಸ ಮುಗಿದಿದೆ. ಇನ್ನು ಶೂಟಿಂಗ್ ಪ್ರಾರಂಭವಾಗಬೇಕು. ಸದ್ಯಕ್ಕೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ ಎನ್ನುವುದು ಸ್ಪಷ್ಟವಾಗಲಿದೆ' ಎನ್ನುತ್ತಾರೆ.

ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ಅರ್ಪಿಸುತ್ತಿದ್ದು, ಚಿತ್ರದ ಬಿಡುಗಡೆ ಮತ್ತು ಪ್ರಚಾರಕ್ಕೆ ಸಹಾಯ ಮಾಡಲಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net