ಕ್ರೀಡಾಪಟುವಿಗೆ ಮಂಡಿ ಆಪರೇಶನ್ ಮಾಡಿಸ್ತಾರಂತೆ ಸೋನು

Sonu - Final
Published on

ಸೋನು ಸೂದ್ ಕಳೆದ ಕೆಲವು ತಿಂಗಳುಗಳಲ್ಲಿ ಅದೆಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಎಂದು ಲೆಕ್ಕ ಇಟ್ಟವರಿಲ್ಲ. ಯಾರ್ಯಾರು ಸಹಾಯ ಕೇಳುತ್ತಾರೋ, ಅವರಿಗೆ ತಮ್ಮ ಕಡೆಯಿಂದ ಸಾಧ್ಯವಾದಷ್ಟೂ ಸಹಾಯವಾಗುವಂತೆ ನೋಡಿಕೊಂಡಿದ್ದಾರೆ ಸೋನು ಸೂದ್. ಇದೀಗ ಅವರು ಒಬ್ಬ ಗಾಯಾಳು ಕ್ರೀಡಾಪಟುವಿಗೆ ಮಂಡಿ ಆಪರೇಶನ್ ಮಾಡಿಸುವುದಕ್ಕೆ ಸಜ್ಜಾಗಿದ್ದಾರೆ.

ಸುಧಾಮ ಕುಮಾರ್ ಯಾದವ್ ಎಂಬ ಜಾವಲಿನ್ ಥ್ರೋಯರ್ ಹೆಸರು ಕೇಳಿರಬಹುದು ನೀವು. 2019ರಲ್ಲಿ ಹಾಂಗ್‍ಕಾಂಗ್‍ನಲ್ಲಿ ನಡೆದ ಏಷ್ಯನ್ ಯೂಥ್ ಗೇಮ್ಸ್‍ನಲ್ಲಿ ಅವರು ದೇಶವನ್ನು ಪ್ರತಿನಿಧಿಸಿದ್ದರು. ಇನ್ನೇನು ಸ್ಪರ್ಧೆ ಶುರುವಾಗುವುದಕ್ಕೆ ಐದು ನಿಮಿಷ ಇದೆ ಎನ್ನುವಾಗ, ವಾರ್ಮಪ್ ಮಾಡುವ ಸಂದರ್ಭದಲ್ಲಿ ಅವರ ಮಂಡಿಗೆ ತೀವ್ರ ಪೆಟ್ಟು ಬಿದ್ದಿದೆ.

ಪೆಟ್ಟು ಬಿದ್ದಿರುವುದರಿಂದ, ಸುಧಾಮಗೆ ಸ್ಪರ್ಧೆಯಲ್ಲಿ ಸರಿಯಾಗಿ ಭಾಗವಹಿಸುವುದಕ್ಕೂ ಸಾಧ್ಯವಾಗಿಲ್ಲ. ಈ ವಿಷಯವಾಗಿ ಸೂಕ್ತ ಚಿಕಿತ್ಸೆ ಪಡೆಯುವುದಕ್ಕೆ ಮುಂದಾದಾಗ, ಒಂದು ಆಪರೇಷನ್ ಮಾಡಿಸಬೇಕೆಂದು ವೈದ್ಯರಿಂದ ಗೊತ್ತಾಗಿದೆ. ಆದರೆ, ಆಪರೇಶನ್ ಮಾಡಿಸುವುದಕ್ಕೆ ತುಂಬಾ ವೆಚ್ಚ ತಗಲುವುದರಿಂದ, ಸುಧಾಮ ಸುಮ್ಮನಾಗಿದ್ದಾರೆ. ಸುಧಾಮ ಸುಮ್ಮನಾದರೂ, ಅವರ ಸಹೋದರ ಸುಮ್ಮನಾಗಿಲ್ಲ.

ಇತ್ತೀಚಿನ ದಿನಗಳಲ್ಲಿ ಸೋನು ಬಹಳಷ್ಟು ಜನರಿಗೆ ಸಹಾಯ ಮಾಡುವುದನ್ನು ಅರಿತಿರುವ ಅವರು, ಟ್ವಿಟರ್ ಮೂಲಕ ಸೋನು ಗಮನ ಸೆಳೆದಿದ್ದಾರೆ. ತಮ್ಮ ಸಹೋದರನಿಗೆ ಚಿಕಿತ್ಸೆಯ ಅಗತ್ಯತೆ ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ವೈದ್ಯರ ಮತ್ತು ತಮ್ಮ ಕುಟುಂಬದವರ ದೂರವಾಣಿ ಸಂಖ್ಯೆಯನ್ನು ಸೋನುಗೆ ಕೊಟ್ಟಿದ್ದಾರೆ.

ಸುಧಾಮ ಯಾದವ್ ಅವರ ಸಮಸ್ಯೆಯ ಬಗ್ಗೆ ಮಾಹಿತಿ ಕಲೆಹಾಕಿದ ಸೋನು, ಆತನಿಗೆ ನೆರವಾಗುವುದಕ್ಕೆ ತೀರ್ಮಾನಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, `ಸುಧಾಮ ಈ ದೇಶದ ಹೆಮ್ಮೆ. ಮೆಡಲ್ ಗೆದ್ದು ಬರುವುದಕ್ಕೆ ತಯಾರಾಗು. ಮುಂದಿನ ವಾರ ನಿನ್ನ ಆಪರೇಶನ್ ಮಾಡಿಸುತ್ತೇನೆ' ಎಂದು ಸೋನು, ಸುಧಾಮಗೆ ಆಶ್ವಾಸನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net