ನಟ ಶಿವರಾಜ್​ಕುಮಾರ್​ ಹೊಸ ಚಿತ್ರಕ್ಕೆ ತೆಲುಗು ನಿರ್ದೇಶಕರ ಆ್ಯಕ್ಷನ್​-ಕಟ್..

Shivarajkumar
Published on

ಬೆಂಗಳೂರು: ಸದ್ಯ ಹಲವಾರು ಸಿನಿಮಾಗಳಲ್ಲಿ ತೊಡಗಿಸಿಕೊಂಡು ಬ್ಯುಸಿಯಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ ಇದೀಗ ಇನ್ನೊಂದು ಸಿನಿಮಾಗೆ ಒಪ್ಪಿಕೊಂಡಿದ್ದು, ಅದಕ್ಕೆ ತೆಲುಗು ಚಿತ್ರರಂಗದ ನಿರ್ದೇಶಕರೊಬ್ಬರು ಆ್ಯಕ್ಷನ್​-ಕಟ್ ಹೇಳಲಿದ್ದಾರೆ.

ತೆಲುಗಿನ ನಿರ್ದೇಶಕ ಕಾರ್ತಿಕ್ ಅದ್ವೈತ್ ಅವರು ಶಿವರಾಜ್​ಕುಮಾರ್ ಅವರ ನೂತನ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ಇವರು ಹೇಳಿರುವ ಕಥೆಗೆ ಮಾರುಹೋಗಿ ಶಿವಣ್ಣ ನಟಿಸಲು ಒಪ್ಪಿಗೆ ನೀಡಿದ್ದಾಗಿ ತಿಳಿದುಬಂದಿದೆ. ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ‘ಪಾಯುಮ್ ಒಲಿ ನೀ ಎನಕ್ಕು’ ಚಿತ್ರ ನಿರ್ದೇಶಿಸಿದ್ದ ಅದ್ವೈತ್, ಇದೀಗ ಸ್ಯಾಂಡಲ್​ವುಡ್ ಅಂಗಳಕ್ಕೆ ಪ್ರವೇಶಿಸಿದ್ದಾರೆ. ಇದು ಇವರಿಗೆ ನಿರ್ದೇಶಕನಾಗಿ ಎರಡನೇ ಸಿನಿಮಾ.

ಇದೊಂದು ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು, ಶಿವಣ್ಣ ವಿಭಿನ್ನ ಪಾತ್ರದಲ್ಲಿ ಅಭಿನಯಿಸಲಿದ್ದು, ವಿಶಿಷ್ಟ ಲುಕ್​ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದೆ. ಮುಂದಿನ ವರ್ಷದಿಂದ ಚಿತ್ರೀಕರಣ ಆರಂಭವಾಗಲಿದೆ. ಬಹಳ ದೊಡ್ಡ ಮೊಟ್ಟದಲ್ಲಿ ಸಿನಿಮಾ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಚಿತ್ರದ ಟೈಟಲ್, ನಾಯಕಿ, ತಾರಾಬಳಗ, ತಾಂತ್ರಿಕ ವರ್ಗ ಇದೆಲ್ಲದರ ಬಗ್ಗೆ ಮುಂಬರುವ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಲಿರುವುದಾಗಿ ನಿರ್ದೇಶಕ ಕಾರ್ತಿಕ್ ಅದ್ವೈತ್ ತಿಳಿಸಿದ್ದಾರೆ.

ಶಿವಣ್ಣ ಅಭಿನಯದ‌ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಹಾಗೂ ತೆಲುಗಿನಲ್ಲಿ 'ಆಫೀಸರ್', 'ಗುಡ್ ಲಕ್ ಸಖಿ' ಸಿನಿಮಾ ನಿರ್ಮಿಸಿರುವ ನಿರ್ಮಾಪಕ ಸುಧೀರ್ ಚಂದ್ರ ಪಡಿರಿ 'ಸುಧೀರ್ ಚಂದ್ರ ಫಿಲಂ ಕಂಪನಿ' ಬ್ಯಾನರ್​ನಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಸದ್ಯ ಶಿವರಾಜ್​ಕುಮಾರ್ ಅವರ 125ನೇ ಸಿನಿಮಾ ‘ವೇದ’ ಡಿಸೆಂಬರ್ ನಲ್ಲಿ ತೆರೆ ಕಾಣಲು ಸಜ್ಜಾಗಿ ನಿಂತಿದೆ. ಘೋಸ್ಟ್, ನೀ ಸಿಗೋವರೆಗೂ, ಫಾರ್ಟಿಫೈವ್, ಕರಟಕ ದಮನಕ ಸಿನಿಮಾಗಳಲ್ಲೂ ಅವರು ಬ್ಯುಸಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net