

Ravi Mohan : ನಟ ರವಿಮೋಹನ್ ಮಾಡಿರುವ ಗಂಭೀರ ಆರೋಪಗಳಿಗೆ ಅವರ ಪತ್ನಿ ಆರತಿ, ಮತ್ತೊಂದು ಸುದೀರ್ಘ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮೂರನೇ ವ್ಯಕ್ತಿಯ ಉಪಸ್ಥಿತಿಯು ನಮ್ಮ ಕೌಟುಂಬಿಕ ಜೀವನವನ್ನು ಹಾಳು ಮಾಡಿದೆ ಎಂದಿರುವ ಆರತಿ, ರವಿಮೋಹನ್ ಅವರ ಸ್ನೇಹಿತೆ ಮತ್ತು ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರ ಹೆಸರು ಹೇಳದೇ ಅವರ ವಿರುದ್ಧ ಪರೋಕ್ಷವಾಗಿ ತಮ್ಮ ಹೊಸ ಪೋಸ್ಟ್ನಲ್ಲಿ ಆರತಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ವಿಚ್ಛೇದನದ ಬಳಿಕ ಆರ್ಥಿಕ ಸಹಾಯ ಮತ್ತು ಇತರ ವಿಷಯಗಳಿಗಾಗಿ ತಿಂಗಳಿಗೆ 40 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಆರತಿ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಜಯಂ ರವಿ ಅವರ ಉತ್ತರವನ್ನು ಕೇಳಿದ ನಂತರ ಜೂನ್ 12 ರಂದು ಈ ಪ್ರಕರಣವನ್ನು ನ್ಯಾಯಾಲಯ ಮತ್ತೆ ಪರಿಗಣಿಸಲಿದೆ. ಇದರ ನಡುವೆ ಕೊನೆಯ ಬಾರಿಗೆ ಯಾವುದೇ ಭಯವಿಲ್ಲದೆ ಕೆಲವು ಸತ್ಯಗಳನ್ನು ಮಾತನಾಡಲು ಬಯಸುತ್ತೇನೆ ಎಂದು ಆರತಿ ಹೊಸ ಪೋಸ್ಟ್ನಲ್ಲಿ ಹೇಳಿದ್ದಾರೆ. ಇತ್ತೀಚೆಗೆ ರವಿ ಅವರು ಮಾಡಿದ ಕೆಲವು ಸುಳ್ಳು ಆರೋಪಗಳನ್ನು ಕೇಳಿದ ನಂತರ, ಮತ್ತೊಮ್ಮೆ ಮಾತನಾಡುವುದನ್ನು ಬಿಟ್ಟು ನನಗೆ ಬೇರೆ ದಾರಿ ಕಾಣುತ್ತಿಲ್ಲ. ಸತ್ಯವನ್ನು ಒಮ್ಮೆಯಾದರೂ ಹೇಳಬೇಕಲ್ಲವೇ ಎಂದಿದ್ದಾರೆ.
ನಮ್ಮ ನಡುವಿನ ಯಾವುದೇ ಸಮಸ್ಯೆಗಳು ನಮ್ಮಿಬ್ಬರನ್ನು ಮುರಿದಿಲ್ಲ. ಹೊರಗಿನ ಯಾರೋ ಒಬ್ಬರಿಂದ ಬಿರುಕು ಮೂಡಿದೆ. ನಿಮ್ಮ ಜೀವನದ ಬೆಳಕು ನಮಗೆ ಕತ್ತಲೆಯನ್ನು ತಂದಿದೆ. ನಾವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲೇ ಈ ವ್ಯಕ್ತಿ ನಮ್ಮೊಂದಿಗಿದ್ದರು. ಇದು ನನ್ನ ಕಲ್ಪನೆಯಲ್ಲ. ಇದು ಸಾಬೀತಾದ ಸತ್ಯ. ತನ್ನ ಗಂಡನನ್ನು ಅತಿಯಾಗಿ ನಿಯಂತ್ರಿಸುವ ಹೆಂಡತಿ ಎಂಬ ಆರೋಪ ನನ್ನ ಮೇಲಿದೆ. ಆದರೆ, ನನ್ನ ಗಂಡನನ್ನು ಅವನ ಕೆಟ್ಟ ಅಭ್ಯಾಸಗಳು ಮತ್ತು ಕೆಟ್ಟ ಸ್ವಭಾವದಿಂದ ರಕ್ಷಿಸಲು ಅವನನ್ನು ನಿಯಂತ್ರಿಸಲು ಪ್ರಯತ್ನಿಸುವುದು ತಪ್ಪೇ? ತಪ್ಪಾಗಿದ್ದರೆ, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ಆರತಿ ಹೇಳಿದ್ದಾರೆ.
ಅವನು ತನ್ನ ಎಲ್ಲ ಆಸ್ತಿ ಮತ್ತು ಘನತೆಯೊಂದಿಗೆ ಮನೆಯಿಂದ ಹೊರಟುಹೋದನೆಂದು ನೀವು ಹೇಳಿದ್ದೀರಿ, ಆದರೆ, ಸತ್ಯ ಏನೆಂದರೆ, ಅವನು ಬ್ರಾಂಡೆಡ್ ಸ್ನೀಕರ್ಸ್ ಮತ್ತು ಅವನ ಎಲ್ಲ ಬಟ್ಟೆಗಳನ್ನು ಧರಿಸಿ, ತನ್ನ ವ್ಯಾಲೆಟ್ ಮತ್ತು ರೇಂಜ್ ರೋವರ್ ಕಾರನ್ನು ತೆಗೆದುಕೊಂಡು ಹೊರಟನು. ಆದರೆ, ನಾನು ಅವನನ್ನು ಮನೆಯಿಂದ ಹೊರಗೆ ಹಾಕಲಿಲ್ಲ. ಬದಲಿಗೆ, ಆತ ಶಾಂತವಾಗಿ ಮತ್ತು ಉದ್ದೇಶಪೂರ್ವಕವಾಗಿಯೇ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ಮನೆಯಿಂದ ಹೊರಟನು ಎಂದು ಆರತಿ ತಿಳಿಸಿದ್ದಾರೆ.
ಅವನು (ರವಿ ಮೋಹನ್) ನಿಜವಾಗಿಯೂ ನನ್ನ ಹಿಡಿತದಿಂದ ತಪ್ಪಿಸಿಕೊಂಡು ಓಡಿಹೋಗಿದ್ದರೆ, ತನ್ನ ಹೆತ್ತವರ ಮನೆಗೆ ಹೋಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಬದಲಾಗಿ, ಆತ ನಮ್ಮ ಜೀವನದ ಮೇಲೆ ಹೆಚ್ಚಿನ ಹಾನಿಯನ್ನುಂಟುಮಾಡುವ ಮತ್ತೊಂದು ಬಾಗಿಲನ್ನು ತಟ್ಟಿದ ಎನ್ನುವ ಮೂಲಕ ರವಿ ಮೋಹನ್, ಕೆನಿಶಾ ಮನೆಗೆ ಹೋದರು ಎಂದಿದ್ದಾರೆ.
18 ವರ್ಷಗಳ ಕೌಟುಂಬಿಕ ಜೀವನದ ನಂತರ, ನೀವು ಘನತೆಯಿಂದ ಬೇರ್ಪಡಬೇಕಿತ್ತು. ಬದಲಾಗಿ, ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ನೀವು ನನ್ನನ್ನು ಬೆಂಕಿಗೆ ಎಸೆದಿದ್ದೀರಿ. ರವಿ ಅವರು ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಾನು ದುರ್ಬಲಳಲ್ಲ, ಸಹಾನುಭೂತಿಗಾಗಿ ನಾನು ಇದನ್ನು ಬರೆಯುತ್ತಿಲ್ಲ. ನಾನು ಹೆಚ್ಚೇನೂ ಹೇಳುವುದಿಲ್ಲ. ಏಕೆಂದರೆ, ನಾನು ಇನ್ನೂ ಕಾನೂನು ವ್ಯವಸ್ಥೆಯನ್ನು ನಂಬುತ್ತೇನೆ ಎಂದು ಆರತಿ ಅವರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಇನ್ನು ಇತ್ತೀಚೆಗೆ ಜಯಂ ರವಿ ಅವರು ಗಾಯಕಿ ಕೆನಿಶಾ ಜೊತೆ ಮದುವೆಯಲ್ಲಿ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಆರತಿ ಅವರು ತುಂಬಾ ಭಾವುಕರಾಗಿ ಪ್ರತಿಕ್ರಿಯಿಸಿದರು. 18 ವರ್ಷಗಳ ಕಾಲ ನನ್ನೊಂದಿಗಿದ್ದ ವ್ಯಕ್ತಿ ಈಗ ಸುಲಭವಾಗಿ ದೂರ ಸರಿದಿದ್ದಾರೆ. ಮಕ್ಕಳ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ನಾನು ಮಾತನಾಡದಿರಲು ಕಾರಣ ನನ್ನ ಪ್ರಾಮಾಣಿಕತೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಯಂ ರವಿ, ಆರತಿ ನನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಯಂತ್ರಿಸುವ ಮೂಲಕ ಮತ್ತು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ನನಗೆ ಕಿರುಕುಳ ನೀಡಿದರು. ನನ್ನ ಜೀವನವನ್ನು ನಿಯಂತ್ರಿಸುತ್ತಿದ್ದರು. ನನಗೆ ನನ್ನದೇಯಾದ ಸ್ವಾತಂತ್ರ್ಯ ಇರಲಿಲ್ಲ. ಅಪ್ಪ-ಅಮ್ಮನನ್ನು ನೋಡಲು ಸಹ ಬಿಡುತ್ತಿರಲಿಲ್ಲ. ನನ್ನ ಅವರ ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದರು. ಇದರಲ್ಲಿ ಆರತಿ ಅವರ ತಾಯಿಯ ಪಾತ್ರವೂ ಇದೆ. ನನ್ನ ಕಷ್ಟಕಾಲದಲ್ಲಿ ಕನಿಶಾ ಬೆಳಕಾದಳು. ಆಕೆ ನನ್ನ ಜೀವನಾಡಿ ಎಂದು ರವಿ ಹೇಳಿದ್ದಾರೆ.
ಆರತಿಯ ತಾಯಿ ಮತ್ತು ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಕೂಡ ವಿವಾದಕ್ಕೆ ಸಿಲುಕಿದ್ದು, ಜಯಂ ರವಿ ಮಾಡಿದ ಆರೋಪಕ್ಕೆ ಪತ್ರದ ಮೂಲಕ ಪ್ರತಿಕ್ರಿಯಿಸಿದರು. ನಾನು ಜಯಂ ರವಿಯನ್ನು ಮಗನಂತೆ ನೋಡಿಕೊಂಡೆ ಮತ್ತು ಆತನಿಗಾಗಿ 100 ಕೋಟಿ ರೂ. ಸಾಲ ಕೂಡ ಮಾಡಿದೆ. ಆದರೆ, ರವಿ ನನ್ನ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ಅವನ ಕುಟುಂಬದ ಈ ಸ್ಥಿತಿಗೆ ನಾನು ಕಾರಣವಲ್ಲ, ಯಾರಾದರೂ ಮಗಳ ಕುಟುಂಬವನ್ನು ಹಾಳು ಮಾಡುತ್ತಾರಾ ಎಂದು ಹೇಳಿದ್ದಾರೆ.
ವಿಚ್ಛೇದನ ಪ್ರಕರಣವು ಪ್ರಸ್ತುತ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದೆ, ಆದರೆ ಎರಡೂ ಗುಂಪುಗಳ ನಡುವಿನ ಮಾತಿನ ಯುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಜೋರಾಗಿದೆ ಮತ್ತು ಮುಂದುವರಿದಿದೆ. (ಏಜೆನ್ಸೀಸ್)