Jayam Ravi: ಕಳೆದ ವರ್ಷ ತಮಿಳು ನಟ ಜಯಂ ರವಿ ಹಾಗೂ ಆರತಿ ಅವರ ಡಿವೋರ್ಸ್ ಭಾರೀ ಸುದ್ದಿಯಾಗಿತ್ತು. ಕಾಲಿವುಡ್ನ ಅತ್ಯಂತ ಮುದ್ದಾದ ಜೋಡಿಯಾಗಿದ್ದ ಇವರು ಇಬ್ಬರು ಗಂಡು ಮಕ್ಕಳ ಜೊತೆ ಸಂತಸ ಜೀವನ ನಡೆಸುತ್ತಿದ್ದರು. ಆದ್ರೆ, ‘ಪೊನ್ನಿಯಿನ್ ಸೆಲ್ವನ್’ ನಟನ ಫ್ಯಾಮಿಲಿ ಲೈಫ್ನಲ್ಲಿ ಸಮಸ್ಯೆಗಳಿವೆ ಎಂದು ರಿವೀಲ್ ಆಗಿದ್ದೇ ತಡ ಕೆಲವೇ ವಾರದಲ್ಲಿ ಜಯಂ ರವಿ ಹಾಗೂ ಆರತಿ ರವಿ ಡಿವೋರ್ಸ್ ವಿಚಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ವಿಚ್ಚೇದನ ವಿಷಯ ಬಹಿರಂಗ ಪಡಿಸಿದ್ದ ಜಯಂ ರವಿ, ಪತ್ನಿ ಗಮನಕ್ಕೆ ತರದೆ ಈ ವಿಚಾರ ಮುನ್ನೆಲೆಗೆ ತಂದಿದ್ದರು ಎಂಬ ಆರೋಪ ವ್ಯಕ್ತವಾಗಿತ್ತು.

ಡೇಟಿಂಗ್ ವದಂತಿ
ಕಳೆದ ಕೆಲವು ತಿಂಗಳುಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಈ ವಿಚಾರ ಮತ್ತೆ ಸ್ಫೋಟಗೊಳ್ಳಲು ಆರತಿ ಮಾಡಿದ ಅದೊಂದು ಸುದೀರ್ಘ, ಭಾವುಕ ಪೋಸ್ಟ್. 18 ವರ್ಷಗಳ ದಾಂಪತ್ಯ ಜೀವನದಿಂದ ದೂರ ಉಳಿದ ಕೆಲವೇ ತಿಂಗಳಲ್ಲಿ ಗಾಯಕಿ ಕೆನಿಶಾ ಅವರೊಂದಿಗೆ ರವಿ ಡೇಟಿಂಗ್ ಮಾಡುತ್ತಿರುವ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಿಡಿಮಿಡಿಗೊಂಡ ಆರತಿ, “ಕಳೆದ ಒಂದು ವರ್ಷದಿಂದ ನಾನು ಮೌನವನ್ನು ಹೊತ್ತು ಸಾಗುತ್ತಿದ್ದೇನೆ. ನನ್ನ ಮಕ್ಕಳು ಶಾಂತಿಯಿಂದ, ಖುಷಿಯಿಂದ ಇರಬೇಕು ಎಂಬ ಕಾರಣಕ್ಕಾಗಿ ನಾನು ಇದನ್ನೆಲ್ಲ ಸಹಿಸಿಕೊಳ್ಳುತ್ತಿದ್ದೀನಿ. ನನ್ನ ವಿರುದ್ಧ ಅನೇಕ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ. ಹಾಗಿದ್ದರೂ, ನಾನು ಎಲ್ಲಿಯೂ ಮಾತನಾಡಲಿಲ್ಲ. ಅದಕ್ಕೆ ಕಾರಣ ನನ್ನ ಮಕ್ಕಳು” ಎಂದಿದ್ದರು.
“ನನ್ನ ಮಕ್ಕಳು ಹೆತ್ತವರ ಅಗಲಿಕೆಯ ನೋವನ್ನು ಅನುಭವಿಸುವುದು ಬೇಡ. ಹಾಗಂತ ನನ್ನಲ್ಲಿ ಸತ್ಯವಿಲ್ಲ ಎಂದಲ್ಲ. ಈಗ ಇಡೀ ಜಗತ್ತು ಫೋಟೋಗಳನ್ನು ನೋಡುತ್ತಿದೆ. ಅಸಲಿಗೆ ನಮ್ಮ ಮಧ್ಯೆ ಏನಾಗಿತ್ತೋ ಅದು ಬೇರೆಯೇ. ವಿಚ್ಛೇದನ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ನನ್ನೊಂದಿಗೆ 18 ವರ್ಷಗಳ ಕಾಲ ಬದುಕಿದ ವ್ಯಕ್ತಿ ಈಗ ಪ್ರೀತಿ, ವಿಶ್ವಾಸ, ಕೊಟ್ಟಿದ್ದ ಭರವಸೆ ಹಾಗೂ ಎಲ್ಲ ಜವಾಬ್ದಾರಿಯನ್ನು ಬದಿಗಿಟ್ಟು ನನ್ನನ್ನು ಬಿಟ್ಟು ಹೋದರು. ನನ್ನ ಜವಾಬ್ದಾರಿ ಎಂದು ಹೇಳಿದ್ದ ಆ ವ್ಯಕ್ತಿ ನನಗೆ ಆರ್ಥಿಕವಾಗಿಯೂ ಹಾಗೂ ಮಾತಿನಿಂದಲೂ ಬೆನ್ನಲುಬಾಗಿ ನಿಲ್ಲಲಿಲ್ಲ” ಎಂದು ಜಯಂ ರವಿ ಬಗ್ಗೆ ಆರೋಪಿಸಿದ್ದರು.
ಆರತಿ ಸರಣಿ ಆರೋಪ
ಆರತಿ ಪೋಸ್ಟ್ ಬೆನ್ನಲ್ಲೇ ಇದೀಗ ತಾವು ಕೂಡ ಸುದೀರ್ಘ ಪತ್ರದ ಮೂಲಕ ತಿರುಗೇಟು ನೀಡಿರುವ ಜಯಂ ರವಿ, “ನನ್ನ ವೈಯಕ್ತಿಕ ಜೀವನ ಈಗ ಗಾಸಿಪ್ನತ್ತ ಸಾಗಿದೆ. ಸತ್ಯದಿಂದ ದೂರ ಉಳಿದು ಕೇವಲ ಸುಳ್ಳುಗಳ ಕಂತೆಯಿಂದಲೇ ತುಂಬಿವೆ. ಇದು ಮಾನಸಿಕ ಖಿನ್ನತೆಗೆ ಕಾರಣವಾಗುತ್ತಿದೆ. ಆರೋಪಗಳಿಗೆ ಪ್ರತಿಕ್ರಿಯಿಸದೆ ಸುಮ್ಮನಿದ್ದ ಮಾತ್ರಕ್ಕೆ ನಾನು ಬಲಹೀನ ಎಂದಲ್ಲ. ಇದು ಬದುಕು. ನನ್ನ ಜೀವನದ ಹಾದಿ, ಕಷ್ಟಗಳನ್ನು ನೋಡದವರು ನನ್ನ ಬಗ್ಗೆ ಸುಖಾಸುಮ್ಮನೆ ಮಾತನಾಡಿದಾಗ ಖಂಡಿತ ಅಲ್ಲಿ ನಾನೇ ಉತ್ತರಿಸಲೇಬೇಕು” ಎಂದಿದ್ದಾರೆ.
ತಂದೆ-ತಾಯಿ ಮುಖ ನೋಡಲು ಬಿಡ್ತಿರಲಿಲ್ಲ
“ಒಂದಷ್ಟು ವರ್ಷಗಳ ಕಾಲ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ವಿಪರೀತ ಆರ್ಥಿಕ ಸಂಕಷ್ಟದಿಂದ ಬಳಲಿದೆ ನಾನು ಒಂದು ಹಕ್ಕಿಯಂತೆ ಗೂಡಿನಲ್ಲಿ ಸೆರೆಯಾಗಿದ್ದ. ನನಗೆ ಜನ್ಮವಿತ್ತ ತಂದೆ-ತಾಯಿಯನ್ನು ಭೇಟಿ ಮಾಡುವುದರಿಂದಲೇ ನನ್ನನ್ನು ದೂರ ಇರಿಸಲಾಗಿತ್ತು. ನನ್ನ ದಾಂಪತ್ಯ ಸಂಬಂಧ ಸರಿದೂಗಿಸಲು ಹಾಗೂ ಉಳಿಸಿಕೊಳ್ಳಲು ಇಷ್ಟೆಲ್ಲ ಕಸರತ್ತು ಮಾಡಬೇಕಾಯಿತು. ಇದೆನ್ನೆಲ್ಲ ಭಾರವಾದ ಮನಸ್ಸಿನಿಂದ ಬರೆದು ಹೇಳುತ್ತಿದ್ದೇನೆ” ಎಂದರು.
ಮಕ್ಕಳ ಮುಖ ನೋಡಲು ಬಿಟ್ಟಿಲ್ಲ
“ನನಗೆ ತುಂಬ ಭಾದಿಸುವ ಸಂಗತಿ ಎಂದರೆ ಅದು ನನ್ನ ಮಕ್ಕಳು. ಅವರಿಬ್ಬರನ್ನೂ ಸಾರ್ವಜನಿಕರ ಸಿಂಪಥಿ ಗಿಟ್ಟಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದು ಅತ್ಯಂತ ದುಃಖಕರ ಸಂಗತಿ. ಪತ್ನಿಯಿಂದ ಬೇರ್ಪಟ್ಟ ದಿನದಿಂದಲೂ ಮಕ್ಕಳೊಂದಿಗೆ ನನ್ನ ಸಂಪರ್ಕವಿಲ್ಲ. ಅದಕ್ಕೆ ಭಾರೀ ಅಡಚಣೆಯಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಮಕ್ಕಳ ಮುಖ ನೋಡಿದ್ದು ಬಿಟ್ಟರೆ ಇನ್ನೆಲ್ಲೂ ಅವರನ್ನು ಪತ್ನಿ ನೋಡಲು ಬಿಟ್ಟಿಲ್ಲ. ಅವರೊಂದಿಗೆ ದೂರವಾಣಿ ಸಂಪರ್ಕಕ್ಕೂ ಸಾಧ್ಯವಿಲ್ಲ. ನನ್ನ ಮಕ್ಕಳೊಂದಿಗೆ ಮಾತನಾಡಲು ಬಿಡದ ನೀವು, ಒಬ್ಬ ತಂದೆ ಆದವನ ಜವಾಬ್ದಾರಿ ಏನು ಎಂದು ಪ್ರಶ್ನಿಸುತ್ತೀರಾ?” ಎಂದು ಜಯಂ ರವಿ ಪತ್ನಿ ಆರತಿ ಆರೋಪಗಳಿಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).
ಕೆನ್ನೆಯಲ್ಲಿ ಮಾಸದ ಕೈ ಗುರುತು! ಜೂ. ವಕೀಲೆಗೆ ಹಿರಿಯ ವಕೀಲನಿಂದ ಥಳಿತ; ಯುವತಿ ಬೆಂಬಲಕ್ಕೆ ಕೇರಳ ಸರ್ಕಾರ | Jr Lawyer