ಕೆನ್ನೆಯಲ್ಲಿ ಮಾಸದ ಕೈ ಗುರುತು! ಜೂ. ವಕೀಲೆಗೆ ಹಿರಿಯ ವಕೀಲನಿಂದ ಥಳಿತ; ಯುವತಿ ಬೆಂಬಲಕ್ಕೆ ಕೇರಳ ಸರ್ಕಾರ | Jr Lawyer

ವಿಜಯವಾಣಿ - 2025-05-15T160931.052
Published on

Jr Lawyer: ಜೂನಿಯರ್ ವಕೀಲೆಯಾಗಿ ಕೋರ್ಟ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ಯಾಮಿಲಿಗೆ ಹಿರಿಯ ವಕೀಲ ಮನಬಂದಂತೆ ಥಳಿಸಿರುವ ಘಟನೆ ಇದೀಗ ದೊಡ್ಡ ವಿವಾದ ಹಾಗೂ ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ಈ ಘಟನೆ ಕೇರಳದ ತಿರುವನಂತಪುರಂನಲ್ಲಿ ವರದಿಯಾಗಿದೆ.

ಕೆನ್ನೆಯಲ್ಲಿ ಮಾಸದ ಗುರುತು

ಬೈಲಿನ್ ದಾಸ್ ಎಂಬಾತ ತನ್ನ ಕಚೇರಿಯಲ್ಲಿನ ಉದ್ಯೋಗಿಗಳೊಂದಿಗೆ ಕೆಟ್ಟದಾಗಿ ವರ್ತಿಸುವುದರ ಜೊತೆಗೆ ಹಿಂಸೆ ನೀಡುತ್ತಿದ್ದ ಎಂಬುದು ಈ ಘಟನೆ ಮೂಲಕ ಬಟಾಬಯಲಾಗಿದೆ. ಈತನ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಬೇಸತ್ತಿದ್ದ ಶ್ಯಾಮಿಲಿ, ಕೆಲಸಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಒಂದಷ್ಟು ವರದಿಗಳು ಉಲ್ಲೇಖಿಸಿವೆ.

ಕೋರ್ಟ್ ಆವರಣದಲ್ಲೇ ಮಹಿಳೆ ಮೇಲೆ ಇಂಥಾ ದೌರ್ಜನ್ಯ ನಡೆಯುತ್ತಿದ್ದರು ತಕ್ಷಣದ ಕ್ರಮ ಯಾಕಿಲ್ಲ? ಇಲ್ಲಿ ಆರೋಪಿಯನ್ನು ತಪ್ಪಿಸಿಕೊಳ್ಳಲು ಬಾರ್​ ಕೌನ್ಸಿಲ್​ ಕಾರಣ ಎಂದು ಹಲ್ಲೆಗೊಳಗಾದ ಯುವತಿಯ ತಾಯಿ ಆರೋಪಿಸಿದ್ದಾರೆ. ಆತ ನನ್ನ ಮಗಳು ಮಾತ್ರವಲ್ಲ ಉಳಿದ ಜೂ. ವಕೀಲರೊಂದಿಗೂ ಕೂಡ ಇದೇ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಕಚೇರಿಯಲ್ಲಿನ ಉದ್ಯೋಗಿಗಳ ಮುಖಕ್ಕೆ ಫೈಲ್‌ಗಳನ್ನು ಎಸೆದು ನಿಂದಿಸುತ್ತಿದ್ದ. ಮಗಳು ಗರ್ಭಿಣಿಯಾಗಿದ್ದಾಗಲೂ ಆಕೆಗೆ ಹೊಡೆದಿರುವುದು ಈಗ ತಿಳಿದುಬಂದಿದೆ ಎಂದು ಆರೋಪಿಸಿದ್ದಾರೆ.

ಹಿರಿಯ ವಕೀಲನ ವರ್ತನೆ ವಿರುದ್ಧ ನೆಟ್ಟಿಗರು, ಬೈಲಿನ್ ದಾಸ್​ನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ವ್ಯಾಪಕ ಛೀಮಾರಿ ಬೆನ್ನಲ್ಲೇ ಇದೀಗ ವಕೀಲನನ್ನು ನ್ಯಾಯಾಲಯದ ಸಂಕೀರ್ಣದಿಂದ ಬ್ಯಾನ್ ಮಾಡಲಾಗಿದೆ. ಶಿಸ್ತು ಸಮಿತಿಯ ಅಂತಿಮ ನಿರ್ಧಾರದವರೆಗೆ ನಿಷೇಧ ಹೇರಲಾಗಿದೆ ಎಂದು ಬಾರ್ ಕೌನ್ಸಿಲ್ ತಿಳಿಸಿದೆ. ಬಂಧನದಿಂದ ಬೈಲಿನ್ ತಪ್ಪಿಸಿಕೊಳ್ಳಲು ನಮ್ಮ ಬಾರ್ ಕೌನ್ಸಿಲ್ ಬೆಂಬಲ ಕೊಟ್ಟಿಲ್ಲ. ಮತ್ತು ಕಾರಣವೂ ಅಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇನ್ನು ಘಟನೆ ಬೆನ್ನಲ್ಲೇ ಹಲ್ಲೆಗೊಳಗಾದ ಯುವತಿಯನ್ನು ಭೇಟಿಯಾದ ಸಚಿವ ವಿ. ಶಿವನ್‌ಕುಟ್ಟಿ, "ಹಿರಿಯ ವಕೀಲರಿಂದ ಯುವತಿ ವಕೀಲೆಯೊಬ್ಬರಿಗೆ ಅಮಾನುಷವಾಗಿ ಥಳಿಸಿದ ಘಟನೆಯಲ್ಲಿ ತಪ್ಪಿತಸ್ಥರನ್ನು ರಕ್ಷಿಸಲು ಯಾರಾದರೂ ಪ್ರಯತ್ನಿಸಿದರೆ ಸರ್ಕಾರ ಮಧ್ಯಪ್ರವೇಶಿಸುತ್ತದೆ" ಎಂದು ಪರೋಕ್ಷವಾಗಿ ಬಾರ್​ ಕೌನ್ಸಿಲ್​ಗೆ ಎಚ್ಚರಿಸಿದರು. "ಇದು ಯಾವುದೇ ರೀತಿಯಲ್ಲಿಯೂ ಸಮರ್ಥನೀಯವಲ್ಲ. ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಆರೋಪಿಯನ್ನು ಬಂಧಿಸಲು ತೆರಳಿದಾಗ ಅವರನ್ನು ತಡೆಯುವುದು ಸರಿಯಲ್ಲ. ಇದು ಕಾರ್ಮಿಕ ವಿವಾದವಲ್ಲದ ಕಾರಣ, ಕಾರ್ಮಿಕ ಇಲಾಖೆ ಇದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ" ಎಂದು ಸಚಿವರು ಹೇಳಿದ್ದಾರೆ.

ಮೇ.13ರಂದು ಘಟನೆ

ಕಳೆದ ಮೂರು ವರ್ಷಗಳಿಂದ ಬೈಲಿನ್ ಜೊತೆ ಜೂನಿಯರ್ ಆಗಿ ಅಭ್ಯಾಸ ಮಾಡುತ್ತಿರುವ ಶ್ಯಾಮಿಲಿಯನ್ನು ಒಂದು ವಾರದ ಹಿಂದೆಯಷ್ಟೇ ಕೆಲಸದಿಂದ ತೆಗೆದುಹಾಕಲಾಗಿತ್ತು. ಎರಡು ದಿನಗಳ ಹಿಂದೆ ಮತ್ತೆ ಆಕೆಗೆ ಕರೆ ಮಾಡಿ, ಕೆಲಸಕ್ಕೆ ಮರಳುವಂತೆ ಒತ್ತಾಯಿಸಿದ ಬೈಲಿನ್, ಕಚೇರಿಗೆ ಬರುವಂತೆ ತಿಳಿಸಿದ್ದ. ಅಂತೆಯೇ ಸ್ಥಳಕ್ಕೆ ಹೋದ ಶ್ಯಾಮಿಲಿ, ನನ್ನನ್ನು ಕೆಲಸದಿಂದ ಕಿತ್ತು ಬಿಸಾಡಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು, ಕಪಾಳಮೋಕ್ಷದಲ್ಲಿ ಅಂತ್ಯಗೊಂಡಿದೆ.

ಘಟನೆ ಮೇರೆಗೆ ಶ್ಯಾಮಿಲಿ ಪತಿ ಪೊಲೀಸರಿಗೆ ದೂರು ನೀಡಿ, ಹಿರಿಯ ವಕೀಲನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಬೈಲಿನ್ ಪರಾರಿಯಾಗಿದ್ದು, ಪೊಲೀಸರಿಂದ ತಲೆಮರಿಸಿಕೊಂಡಿದ್ದಾನೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net