

Aarti Ravi: ಕಳೆದ ವರ್ಷ ತಮಿಳು ನಟ ಜಯಂ ರವಿ ಹಾಗೂ ಆರತಿ ಅವರ ಡಿವೋರ್ಸ್ ಭಾರೀ ಸುದ್ದಿಯಾಗಿತ್ತು. ಕಾಲಿವುಡ್ನ ಅತ್ಯಂತ ಮುದ್ದಾದ ಜೋಡಿಯಾಗಿದ್ದ ಇವರು ಇಬ್ಬರು ಗಂಡು ಮಕ್ಕಳ ಜೊತೆ ಸಂತಸ ಜೀವನ ನಡೆಸುತ್ತಿದ್ದರು. ಆದ್ರೆ, 'ಪೊನ್ನಿಯಿನ್ ಸೆಲ್ವನ್' ನಟನ ಫ್ಯಾಮಿಲಿ ಲೈಫ್ನಲ್ಲಿ ಸಮಸ್ಯೆಗಳಿವೆ ಎಂದು ರಿವೀಲ್ ಆಗಿದ್ದೇ ತಡ ಕೆಲವೇ ವಾರದಲ್ಲಿ ಜಯಂ ರವಿ ಹಾಗೂ ಆರತಿ ರವಿ ಡಿವೋರ್ಸ್ ವಿಚಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ವಿಚ್ಚೇದನ ವಿಷಯ ಬಹಿರಂಗ ಪಡಿಸಿದ್ದ ಜಯಂ ರವಿ ನನ್ನ ಗಮನಕ್ಕೆ ತರದೆ ಈ ಕೆಲಸ ಮಾಡಿದ್ದಾರೆ ಎಂದು ಆರತಿ ಆರೋಪಿಸಿದ್ದರು.
18 ವರ್ಷಗಳ ದಾಂಪತ್ಯ ಜೀವನದಿಂದ ದೂರ ಉಳಿದ ಕೆಲವೇ ತಿಂಗಳಲ್ಲಿ ಗಾಯಕಿ ಕೆನಿಶಾ ಅವರೊಂದಿಗೆ ರವಿ ಡೇಟಿಂಗ್ ಮಾಡುತ್ತಿರುವ ಸುದ್ದಿ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಚಾರ ವದಂತಿ ಎಂದೇ ನಂಬಲಾಗಿತ್ತು. ಆದರೆ, ಇತ್ತೀಚೆಗೆ ನಡೆದ ಮದುವೆ ಸಮಾರಂಭದಲ್ಲಿ ಕೆನಿಶಾ ಜೊತೆ ಕಾಣಿಸಿಕೊಂಡ ಜಯಂ ರವಿ, ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ. ರವಿ-ಕೆನಿಶಾ ಜೋಡಿ ಫೋಟೋ ವೈರಲ್ ಆಗ್ತಿದ್ದಂತೆ ಇದೀಗ ಆರತಿ ಸುದೀರ್ಘ ಪತ್ರದ ಮೂಲಕ ತಮ್ಮ ಭಾವನೆಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ, ನಿರ್ಮಾಪಕ ಇಶಾರಿ ಗಣೇಶ್ ಅವರ ಪುತ್ರಿ ವಿವಾಹಕ್ಕೆ ಆಗಮಿಸಿದ ಜಯಂ ರವಿ ಮತ್ತು ಕೆನಿಶಾ ಜೋಡಿ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಈ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ತನ್ನ ಮನದಾಳದ ಮಾತನ್ನು ಸುದೀರ್ಘ ಪತ್ರದಲ್ಲಿ ವಿವರಿಸಿದ ಆರತಿ, "ಕಳೆದ ಒಂದು ವರ್ಷದಿಂದ ನಾನು ಮೌನವನ್ನು ಹೊತ್ತು ಸಾಗುತ್ತಿದ್ದೇನೆ. ನನ್ನ ಮಕ್ಕಳು ಶಾಂತಿಯಿಂದ, ಖುಷಿಯಿಂದ ಇರಬೇಕು ಎಂಬ ಕಾರಣಕ್ಕಾಗಿ ನಾನು ಇದನ್ನೆಲ್ಲ ಸಹಿಸಿಕೊಳ್ಳುತ್ತಿದ್ದೀನಿ. ನನ್ನ ವಿರುದ್ಧ ಅನೇಕ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ. ಹಾಗಿದ್ದರೂ, ನಾನು ಎಲ್ಲಿಯೂ ಮಾತನಾಡಲಿಲ್ಲ. ಅದಕ್ಕೆ ಕಾರಣ ನನ್ನ ಮಕ್ಕಳು" ಎಂದಿದ್ದಾರೆ.
"ನನ್ನ ಮಕ್ಕಳು ಹೆತ್ತವರ ಅಗಲಿಕೆಯ ನೋವನ್ನು ಅನುಭವಿಸುವುದು ಬೇಡ. ಹಾಗಂತ ನನ್ನಲ್ಲಿ ಸತ್ಯವಿಲ್ಲ ಎಂದಲ್ಲ. ಈಗ ಇಡೀ ಜಗತ್ತು ಫೋಟೋಗಳನ್ನು ನೋಡುತ್ತಿದೆ. ಅಸಲಿಗೆ ನಮ್ಮ ಮಧ್ಯೆ ಏನಾಗಿತ್ತೋ ಅದು ಬೇರೆಯೇ. ವಿಚ್ಛೇದನ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ನನ್ನೊಂದಿಗೆ 18 ವರ್ಷಗಳ ಕಾಲ ಬದುಕಿದ ವ್ಯಕ್ತಿ ಈಗ ಪ್ರೀತಿ, ವಿಶ್ವಾಸ, ಕೊಟ್ಟಿದ್ದ ಭರವಸೆ ಹಾಗೂ ಎಲ್ಲ ಜವಾಬ್ದಾರಿಯನ್ನು ಬದಿಗಿಟ್ಟು ನನ್ನನ್ನು ಬಿಟ್ಟು ಹೋದರು. ನನ್ನ ಜವಾಬ್ದಾರಿ ಎಂದು ಹೇಳಿದ್ದ ಆ ವ್ಯಕ್ತಿ ನನಗೆ ಆರ್ಥಿಕವಾಗಿಯೂ ಹಾಗೂ ಮಾತಿನಿಂದಲೂ ಬೆನ್ನಲುಬಾಗಿ ನಿಲ್ಲಲಿಲ್ಲ" ಎಂದು ಹೇಳಿದ್ದಾರೆ.
"ನಮ್ಮನ್ನು ನಮ್ಮ ಮನೆಯಿಂದಲೇ ಹೊರಗೆ ಹಾಕಲಾಗಿದೆ. ಬ್ಯಾಂಕ್ ಅಧಿಕಾರಿಗಳ ಜೊತೆ ಸೇರಿ, ನನ್ನೊಂದಿಗೆ ಈ ಮನೆಯನ್ನು ಕಟ್ಟಿದ ಅದೇ ವ್ಯಕ್ತಿ ಇಂದು ನನ್ನನ್ನು ಹೊರ ಹೋಗುವಂತೆ ಮಾಡಿದ್ದಾರೆ. ಎಲ್ಲರೂ ನಾನು ಹಣಕ್ಕಾಗಿ ಈ ಡಿವೋರ್ಸ್ ನಾಟಕ ಆಡುತ್ತಿದ್ದೇನೆ ಎಂದು ಭಾವಿಸಿದ್ದಾರೆ. ಅಸಲಿಗೆ ಅದೇ ನಿಜವಾಗಿದ್ದರೆ, ನಾನು ಯಾವಾಗಲೋ ನನ್ನ ಸ್ವಾರ್ಥದೊಂದಿಗೆ ಬದುಕುತ್ತಿದ್ದೆ. ಆದರೆ ನಾನು ಹಾಗೆ ಮಾಡಲಿಲ್ಲ. ನಾನು ಪ್ರೀತಿಯನ್ನು ಹಂಚಿಕೊಂಡೆ. ನಂಬಿಕೆಯನ್ನು ಉಸಿರಾಗಿಸಿಕೊಂಡೆ. ಇದೇ ನನ್ನನ್ನು ಈ ಪರಿಸ್ಥಿತಿಗೆ ದೂಡಿದೆ" ಎಂದರು.
"ನಿನ್ನನ್ನು ಪ್ರೀತಿಸಿದ್ದಕ್ಕೆ ನನಗೆ ಪಶ್ಚಾತಾಪವಿಲ್ಲ. ಆದರೆ ಅದನ್ನು ದೌರ್ಬಲ್ಯವಾಗಿ ಬಳಸಿಕೊಂಡಿದ್ದಕ್ಕೆ ವಿಷಾದವಿದೆ. ನನ್ನಿಬ್ಬರು ಮಕ್ಕಳು 10 ಮತ್ತು 14 ವರ್ಷ ವಯಸ್ಸಿನವರು. ಅವರಿಗೆ ಈಗ ಬೇಕಾಗಿರುವುದು ಭದ್ರತೆಯೇ ಹೊರತು ಆಘಾತ, ಮೌನವಲ್ಲ. ಈ ಕಾನೂನುಗಳನ್ನು ಅರ್ಥಮಾಡಿಕೊಳ್ಳಲು ಅವರಿನ್ನೂ ಚಿಕ್ಕವರು. ಉತ್ತರಿಸದ ಕರೆಗಳು, ರದ್ದಾದ ಸಭೆಗಳು, ಇವೆಲ್ಲವೂ ನಾನು ಅನುಭವಿಸಿದ ಗಾಯಗಳು. ನಾನು ಇಂದು ಹೆಂಡತಿಯಾಗಿ ಮಾತನಾಡುತ್ತಿಲ್ಲ. ಬದಲಿಗೆ ಮಕ್ಕಳ ಯೋಗಕ್ಷೇಮದ ಬಗ್ಗೆ ಯೋಚಿಸುವ ತಾಯಿಯಾಗಿ ಮಾತ್ರ ಮಾತನಾಡುತ್ತಿದ್ದೀನಿ. ಈಗ ನಾನು ಮಾತನಾಡದಿದ್ದರೆ, ಶಾಶ್ವತವಾಗಿ ಸೋಲಿಗೆ ಶರಣಾಗುತ್ತೀನಿ" ಎಂದು ಹೇಳಿದ್ದಾರೆ.
"ನೀವು ಏನು ಬೇಕಾದರೂ ಮಾಡಬಹುದು. ಆದರೆ ಸತ್ಯವನ್ನು ಬದಲಾಯಿಸಲು ಮಾತ್ರ ಸಾಧ್ಯವಿಲ್ಲ. ತಂದೆ ಎಂಬುದು ಬಿರುದಲ್ಲ, ಅದೊಂದು ಜವಾಬ್ದಾರಿ. ನಮ್ಮ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ, ನನ್ನ ಹೆಸರು ರವಿ. ಮಾಧ್ಯಮಗಳು ನನ್ನನ್ನು ಮಾಜಿ ಪತ್ನಿ ಎಂದು ಕರೆಯಬೇಡಿ. ನಾವು ಇನ್ನೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿಲ್ಲ. ಇದು ಸೇಡು ಅಥವಾ ಬೇರೇನೂ ಅಲ್ಲ. ತಾಯಿಯಾಗಿ ನನ್ನ ಮಕ್ಕಳನ್ನು ರಕ್ಷಿಸುವುದು ನನ್ನ ಜವಾಬ್ದಾರಿ. ನಾನು ಕಣ್ಣೀರಿಡುವುದಿಲ್ಲ. ಗೋಳಾಡುವುದಿಲ್ಲ. ಆದರೆ, ಬಲವಾಗಿ ನಿಲ್ಲುತ್ತೇನೆ. ಇನ್ನೂ ನಿಮ್ಮನ್ನು ತಂದೆ ಎಂದು ಕರೆಯುವ ನನ್ನ ಇಬ್ಬರು ಗಂಡು ಮಕ್ಕಳಿಗಾಗಿ ನಾನು ನಿಮ್ಮನ್ನು ಬಿಟ್ಟುಕೊಡುವುದಿಲ್ಲ" ಎಂದು ಆರತಿ ರವಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).