Territorial Army: ಸದ್ಯ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪರಿಸ್ಥಿತಿ ತೀರ ಬಿಗಿಯಾದ ಹಿನ್ನೆಲೆ ಈಗಾಗಲೇ ಗಡಿಭಾಗಗಳಲ್ಲಿ ಹೈಅಲರ್ಟ್ ಮಾಡಲಾಗಿದ್ದು, ಪೊಲೀಸ್ ಮತ್ತು ಸೇನಾ ಅಧಿಕಾರಿಗಳ ರಜೆಯನ್ನು ಕಡಿತಗೊಳಿಸಲಾಗಿದೆ. ಈ ಎಲ್ಲ ಬೆಳವಣಿಗೆಯ ನಡುವೆ ಸಕ್ರಿಯ ಕರ್ತವ್ಯಕ್ಕಾಗಿ ಪ್ರಾದೇಶಿಕ ಸೇನೆಯ ಸಿಬ್ಬಂದಿಯನ್ನು ಕರೆಸಿಕೊಳ್ಳಲು ಇದೀಗ ಕೇಂದ್ರ ಸರ್ಕಾರ ಭಾರತೀಯ ಸೇನಾ ಮುಖ್ಯಸ್ಥರಿಗೆ ಅಧಿಕಾರ ನೀಡಿದೆ.

ಇದನ್ನೂ ಓದಿ: ಧರ್ಮಶಾಲಾದಲ್ಲಿ ಬಿಸಿಸಿಐ ಯಶಸ್ವಿ ಕಾರ್ಯಾಚರಣೆ; ಸ್ಟೇಡಿಯಂನಿಂದ ಶಾಂತವಾಗಿ 25 ಸಾವಿರ ಪ್ರೇಕ್ಷಕರ ನಿರ್ಗಮನ!
ದೇಶದಲ್ಲಿನ ಈ ಎರಡನೇ ಸಾಲಿನ ರಕ್ಷಣಾ ವ್ಯವಸ್ಥೆಯು ಹಲವು ವರ್ಷಗಳಿಂದ ಮುಖ್ಯ ಆಧಾರವಾಗಿದೆ. ಅರೆಕಾಲಿಕ ಯೋಧರನ್ನು ಹೊಂದಿರುವ ‘ಟೆರಿಟೋರಿಯಲ್ ಆರ್ಮಿ’ ಅಗತ್ಯ ಸಮಯದಲ್ಲಿ ನಿಯಮಿತ ಸೇನೆಗೆ ಸಹಾಯವನ್ನು ಒದಗಿಸುತ್ತದೆ. ಈ ಮೀಸಲು ಪಡೆಯಲ್ಲಿ ಕ್ರಿಕೆಟ್ ದಂತಕಥೆ ಎಂ.ಎಸ್. ಧೋನಿ, ಮಲಯಾಳಂ ನಟ ಮೋಹನ್ ಲಾಲ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಭಾರತೀಯ ರಾಜಕಾರಣಿ ಅನುರಾಗ್ ಠಾಕೂರ್ ರಂತಹ ಹೆಸರಾಂತ ಭಾರತೀಯರು ಇದ್ದಾರೆ.
ಏನಿದು ಪ್ರಾದೇಶಿಕ ಸೈನ್ಯ (Territorial Army)?
ಪ್ರಾದೇಶಿಕ ಸೈನ್ಯ (TA) ಅರೆಕಾಲಿಕ ಸ್ವಯಂಸೇವಕರ ಸಹಾಯಕ ಮಿಲಿಟರಿ ಸಂಘಟನೆಯಾಗಿದ್ದು, ಇದು ಭಾರತೀಯ ಸೈನ್ಯಕ್ಕೆ ಬೆಂಬಲ ಸೇವೆಗಳನ್ನು ಒದಗಿಸುತ್ತದೆ. ದೇಶದ ಎರಡನೇ ಸಾಲಿನ ರಕ್ಷಣಾ ಪಡೆ ಎಂದೂ ಕರೆಯಲ್ಪಡುವ ಇದು ಯುದ್ಧ ಸಮಯದಲ್ಲಿ ಸಣ್ಣ-ಪುಟ್ಟ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ, ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುವ ಹಾಗೂ ಅಗತ್ಯ ಸೇವೆಗಳನ್ನು ಪೂರೈಕೆ ಮಾಡುವ ಅರೆಕಾಲಿಕ ಯೋಧರ ಪಡೆಯಾಗಿದೆ.
ಪ್ರಸ್ತುತ, ಪ್ರಾದೇಶಿಕ ಸೈನ್ಯವು ಸುಮಾರು 50,000 ಸಿಬ್ಬಂದಿಯನ್ನು ಒಳಗೊಂಡಿದೆ. ಇದರಲ್ಲಿ 65 ಇಲಾಖಾ ಘಟಕಗಳು (ಉದಾ, ರೈಲ್ವೆ, IOC, ONGC) ಮತ್ತು ಇಲಾಖೆ-ಅಲ್ಲದ ಪದಾತಿ ದಳ ಮತ್ತು ಎಂಜಿನಿಯರ್ ಬೆಟಾಲಿಯನ್ ಪಡೆ ಸೇರಿವೆ. ಪರಿಸರ ಕಾರ್ಯಪಡೆಗಳಂತಹ ವಿಶೇಷ ಘಟಕಗಳು ಅರಣ್ಯೀಕರಣ ಮತ್ತು ಸ್ವಚ್ಛ ಗಂಗಾ ಮಿಷನ್‌ನಂತಹ ಪರಿಸರ ಯೋಜನೆಗಳಲ್ಲಿ ಕೆಲಸ ಮಾಡುತ್ತವೆ.
ಪ್ರಾದೇಶಿಕ ಸೇನೆಯಲ್ಲಿ ಅಧಿಕಾರಿಯಾಗಲು, ಮೊದಲಿಗೆ ಭಾರತೀಯ ಪೌರತ್ವವನ್ನು ಹೊಂದಿರಬೇಕು. 18ರಿಂದ 42 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು ಮತ್ತು ಉದ್ಯೋಗದಲ್ಲಿರಬೇಕು. ಇದಿಷ್ಟು ಅಲ್ಲಿನ ಮೂಲ ನಿಯಮಗಳು,(ಏಜೆನ್ಸೀಸ್).