ಗಾಯಕಿ ಕೆನಿಶಾ ನನ್ನ... ಪತ್ನಿ ಆರತಿ ಪೋಸ್ಟ್​ಗೆ ಜಯಂ ರವಿ ನೀಡಿದ ಪ್ರತ್ಯುತ್ತರ ವೈರಲ್! Ravi Mohan ​

Ravi Mohan
Published on

Ravi Mohan : ತಮಿಳು ಚಿತ್ರರಂಗದ ಸ್ಟಾರ್​ ನಟರಲ್ಲಿ ಒಬ್ಬರಾದ ರವಿ ಮೋಹನ್ ಅಲಿಯಾಸ್​ ಜಯಂ ರವಿ, ಕಳೆದ ವರ್ಷ ತಮ್ಮ ಪತ್ನಿ ಆರತಿಯಿಂದ ವಿಚ್ಛೇದನ ಪಡೆದ ನಂತರ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಜಯಂ ರವಿಗೆ ಗಾಯಕಿ ಕೆನಿಶಾ ಜತೆ ಲವ್​ ಅಫೇರ್​ ಇದೆ ಎಂಬ ವದಂತಿಯೂ ಇದೆ. ಅದಕ್ಕೆ ಪುಷ್ಟಿ ನೀಡುವಂತೆ ಅವರಿಬ್ಬರು ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಭಾರೀ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಜಯಂ ರವಿ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ.

ನಟ ರವಿ ಮೋಹನ್ ತಮಿಳು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಕಳೆದ ವರ್ಷದ ಕೊನೆಯಲ್ಲಿ ಇದ್ದಕ್ಕಿದ್ದಂತೆ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಇನ್ಮುಂದೆ ಜಯಂ ರವಿ ಎಂದು ಕರೆಯಬೇಡಿ, ರವಿ ಮೋಹನ್​ ಎಂದು ಕರೆಯುವಂತೆ ಮನವಿ ಮಾಡಿಕೊಂಡರು. ಅಂದಹಾಗೆ, ಜಯಂ ರವಿ ಅವರು ನಟಿಸಿರುವ ಎಲ್ಲಾ ಚಿತ್ರಗಳು ವಿಶಿಷ್ಟ ಶೈಲಿಯನ್ನು ಹೊಂದಿರುವುದರಿಂದ, ಅವರಿಗೆ ಆದ ಪ್ರತ್ಯೇಕ ಅಭಿಮಾನಿ ಬಳಗವಿದೆ.

ಕೊನೆಯದಾಗಿ ಬಿಡುಗಡೆಯಾದ ಕಾದಲಿಕ್ಕ ನೇರಮಿಲೈ ಚಿತ್ರವೂ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. ಪ್ರಸ್ತುತ ಶಿವಕಾರ್ತಿಕೇಯನ್ ಅವರ ಮುಂಬರುವ ಚಿತ್ರ ಪರಾಶಕ್ತಿಯಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಇದಲ್ಲದೆ, ರವಿ ಮೋಹನ್ ಟಾಟಾ ಚಿತ್ರದ ನಿರ್ದೇಶಕ ಗಣೇಶ್ ಕೆ ಬಾಬು ನಿರ್ದೇಶನದ ಕರಾಟೆ ಬಾಬು ಚಿತ್ರದಲ್ಲೂ ನಟಿಸುತ್ತಿದ್ದಾರೆ.

ರವಿಯವರ ವಿಚ್ಛೇದನ ಘೋಷಣೆಯಾದಾಗ, ಇನ್ನೊಂದು ವಿಷಯವೂ ಬೆಳಕಿಗೆ ಬಂದಿತು. ಅದೇನೆಂದರೆ, ಗೋವಾದ ಗಾಯಕಿ ಕೆನಿಶಾ ಅವರೊಂದಿಗೆ ಇದ್ದ ಫೋಟೋಗಳು ಬಹಿರಂಗವಾದವು. ಇಬ್ಬರ ನಡುವೆ ಲವ್​ ಅಫೇರ್​ ಇದೆ ಎಂಬ ಸುದ್ದಿ ಹರಿದಾಡಿತು. ಅಲ್ಲದೆ, ವಿಚ್ಛೇದನಕ್ಕೆ ಇದೇ ಕಾರಣ ಅಂತಾನೂ ಹೇಳಲಾಯಿತು. ಆದರೆ, ಆ ವದಂತಿಯನ್ನು ಕೆನಿಶಾ ತಳ್ಳಿಹಾಕಿದರು. ಆದರೆ, ಇತ್ತೀಚೆಗೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವುದನ್ನು ನೋಡಿದರೆ, ವದಂತಿ ಎಲ್ಲ ನಿಜವೆಂದು ತೋರುತ್ತಿದೆ.

ಇತ್ತೀಚೆಗೆ, ನಿರ್ಮಾಪಕ ಇಸಾರಿ ಗಣೇಶ್ ಅವರ ಪುತ್ರಿ ಪ್ರೀತಾ ಅವರ ವಿವಾಹದಲ್ಲಿ, ಕೆನಿಶಾ ಮತ್ತು ರವಿ ಮೋಹನ್​ ಒಟ್ಟಿಗೆ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೊಸ ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ, ಜಯಂ ರವಿ ಅವರ ಮಾಜಿ ಪತ್ನಿ ಆರತಿ ಕೂಡ ಪೋಸ್ಟ್​ ಒಂದನ್ನು ಹಂಚಿಕೊಳ್ಳುವ ಮೂಲಕ ಸಂಚಲನ ಮೂಡಿಸಿದರು. ತಂದೆ ಎಂಬುದು ಬಿರುದಲ್ಲ, ಅದೊಂದು ಜವಾಬ್ದಾರಿ. ನಮ್ಮ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ, ನನ್ನ ಹೆಸರು ಆರತಿ ರವಿ. ಮಾಧ್ಯಮಗಳು ನನ್ನನ್ನು ಮಾಜಿ ಪತ್ನಿ ಎಂದು ಕರೆಯಬೇಡಿ. ನಾವು ಇನ್ನೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿಲ್ಲ. ಇದು ಸೇಡು ಅಥವಾ ಬೇರೇನೂ ಅಲ್ಲ. ತಾಯಿಯಾಗಿ ನನ್ನ ಮಕ್ಕಳನ್ನು ರಕ್ಷಿಸುವುದು ನನ್ನ ಜವಾಬ್ದಾರಿ. ನಾನು ಕಣ್ಣೀರಿಡುವುದಿಲ್ಲ, ಗೋಳಾಡುವುದಿಲ್ಲ ಆದರೆ, ಬಲವಾಗಿ ನಿಲ್ಲುತ್ತೇನೆ. ಇನ್ನೂ ನಿಮ್ಮನ್ನು ತಂದೆ ಎಂದು ಕರೆಯುವ ನನ್ನ ಇಬ್ಬರು ಗಂಡು ಮಕ್ಕಳಿಗಾಗಿ ನಾನು ನಿಮ್ಮನ್ನು ಬಿಟ್ಟುಕೊಡುವುದಿಲ್ಲ ಎಂದು ಆರತಿ ರವಿ ಬರೆದುಕೊಂಡಿದ್ದರು. ಅಲ್ಲದೆ, ಜಯಂ ರವಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದರು.

ಇದೇ ಪರಿಸ್ಥಿತಿಯಲ್ಲಿ, ಜಯಂ ರವಿ ಅವರು ಸುದೀರ್ಘ ಪತ್ರವೊಂದನ್ನು ಹಂಚಿಕೊಂಡಿದ್ದು, ಸ್ಪಷ್ಟನೆ ನೀಡುವ ಪ್ರಯತ್ನವನ್ನು ಮಾಡಿದ್ದಾರೆ. ನನ್ನ ಮೌನ ದೌರ್ಬಲ್ಯವಲ್ಲ. ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸಿದರೆ, ನಾನು ಮಾತನಾಡಲೇಬೇಕು. ನನಗೆ ಕಾನೂನಿನಲ್ಲಿ ಸಂಪೂರ್ಣ ನಂಬಿಕೆ ಇದೆ. ಇದು ಸತ್ಯವನ್ನು ಬೆಳಕಿಗೆ ತರುತ್ತದೆ. ಒಬ್ಬ ತಂದೆಯಾಗಿ ನನ್ನನ್ನು ಪ್ರಶ್ನಿಸುವ ಆರೋಪಗಳನ್ನು ನಾನು ನಿರಾಕರಿಸುತ್ತೇನೆ. ಒಬ್ಬ ತಂದೆಯಾಗಿ, ನನ್ನ ಮಕ್ಕಳನ್ನು ಸರಿಯಾಗಿ ನೋಡಲು ನನಗೆ ಅವಕಾಶವಿಲ್ಲ. ಒಬ್ಬ ತಂದೆಯಾಗಿ ನಾನು ದೂರ ಹೋಗಲು ಅನುಭವಿಸಿದ ನೋವು ಅವರಿಗೆ ತಿಳಿದಿರುತ್ತದೆ ಎಂದಿದ್ದಾರೆ.

ನನ್ನ ಮಾಜಿ ಪತ್ನಿ ನನ್ನ ಮೇಲೆ ಆರ್ಥಿಕ ದುರುಪಯೋಗದ ಆರೋಪ ಮಾಡುವುದು ಹಾಸ್ಯಾಸ್ಪದ ಮತ್ತು ಆಘಾತಕಾರಿ. ಇದೇ ನನ್ನ ಕೊನೆಯ ವರದಿ. ಅವರು ಇನ್ನೂ ಹೆಚ್ಚಿನ ನೋವನ್ನು ಅನುಭವಿಸುತ್ತಾರೆಂದು ನನಗೆ ಖಚಿತವಾಗಿದೆ. ಕಣ್ಣೀರು ಮತ್ತು ರಕ್ತದ ವಾತಾವರಣದಲ್ಲಿ ಕೆನಿಶಾ ನನ್ನ ಜೀವನಾಡಿಯಾಗಿದ್ದರು ಎಂದು ರವಿ ಮೋಹನ್​ ಬರೆದುಕೊಂಡಿದ್ದಾರೆ. ಈ ಮೂಲಕ ಕೆನಿಶಾ ಜತೆಗಿರುವ ತಮ್ಮ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ.

ಸದ್ಯ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಹೊಸ ಬಿರುಗಾಳಿಯನ್ನು ಸೃಷ್ಟಿಸುತ್ತಿದೆ. ಇಬ್ಬರಲ್ಲಿ ಯಾರದ್ದು ತಪ್ಪು ಎಂದು ತಿಳಿಯದೇ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಅಭಿಮಾನಿಗಳು ಜಯಂ ರವಿ ಅವರನ್ನು ಬೆಂಬಲಿಸಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net