

ಚೆನ್ನೈ: ಲೇಡಿ ಸೂಪರ್ಸ್ಟಾರ್ ನಯನತಾರಾ ( Nayanthara ) ಮತ್ತು ಸ್ಟಾರ್ ನಿರ್ದೇಶಕ ವಿಘ್ನೇಶ್ ಶಿವನ್, 2022, ಜೂನ್ 9ರಂದು ಸಪ್ತಪದಿ ತುಳಿದರು. ನಾಲ್ಕು ವರ್ಷಗಳ ಡೇಟಿಂಗ್ ಬಳಿಕ ವೈವಾಹಿಕ ಜೀವನ ಆರಂಭಿಸಿದರು. ಸದ್ಯ ದಂಪತಿಗೆ ಉಳಗ್ ಮತ್ತು ಉಯಿರ್ ಹೆಸರಿ ಇಬ್ಬರು ಗಂಡು ಮಕ್ಕಳಿದ್ದಾರೆ.
ಜೂನ್ 9ರಂದು ಮಹಾಬಲಿಪುರಂನ ರೆಸಾರ್ಟ್ ಒಂದರಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಾಸ್ತ್ರೋಕ್ತವಾಗಿ ಮದುವೆಯಾದರು. ಈ ವೇಳೆ ಒಪ್ಪಂದದಂತೆ ಅವರ ವಿವಾಹ ಸಮಾರಂಭದ ಸಂಪೂರ್ಣ ಚಿತ್ರಣವನ್ನು ಓಟಿಟಿ ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ ಸೆರೆಹಿಡಿದಿತ್ತು. ಸುಮಾರು ಎರಡೂವರೆ ವರ್ಷಗಳ ಬಳಿಕ ಇದೇ ನವೆಂಬರ್ 18ರಂದು ವಿವಾಹ ಸಮಾರಂಭದ ಅದ್ಧೂರಿ ಕ್ಷಣವನ್ನು ನೆಟೆಫ್ಲಿಕ್ಸ್ ತೆರೆಯ ಮೇಲೆ ತರುತ್ತಿದೆ. ಇದಕ್ಕೆ “ನಯನತಾರಾ: ಕಾಲ್ಪನಿಕ ಕಥೆಯ ಆಚೆಗೆ” ಎಂಬ ಶೀರ್ಷೀಕೆಯನ್ನು ನೀಡಲಾಗಿದೆ.
ಮದುವೆ ಸಮಾರಂಭದ ಡಾಕ್ಯುಮೆಂಟರಿ ಬಿಡುಗಡೆ ಹಿನ್ನೆಲೆಯಲ್ಲಿ ನೆಟ್ಫ್ಲಿಕ್ಸ್ ತನ್ನ ಇನ್ಸ್ಟಾಗ್ರಾಂನಲ್ಲಿ ನಯನತಾರಾ ಮತ್ತು ವಿಘ್ನೇಶ್ ಮಾತನಾಡಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿದೆ. ಇದರಲ್ಲಿ ಇಬ್ಬರು ಸಾಕಷ್ಟು ನೆನಪುಗಳನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಯನತಾರಾ ಮತ್ತು ವಿಘ್ನೇಶ್ ಶಿವನ್ ಮೊದಲ ಬಾರಿಗೆ 2015 ರಲ್ಲಿ ನಾನು ರೌಡಿ ಥಾನ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ವಿಘ್ನೇಶ್ ಈ ಚಿತ್ರದ ನಿರ್ದೇಶಕ. ನಯನತಾರಾ ಮತ್ತು ವಿಜಯ್ ಸೇತುಪತಿ ಮುಖ್ಯ ಪಾತ್ರದಲ್ಲಿ ನಟಿಸಿದರು. ಈ ಚಿತ್ರದ ಶೂಟಿಂಗ್ ವೇಳೆ ಇಬ್ಬರಿಗೂ ಲವ್ ಆಗಿ 4 ವರ್ಷಗಳ ಕಾಲ ಡೇಟಿಂಗ್ ಮಾಡಿ, 2022ರ ಜೂನ್ 9ರಂದು ಮದುವೆಯಾದರು.
ವಿಘ್ನೇಶ್ ಅವರು ನಯನತಾರಾರನ್ನು ಪ್ರೀತಿಸುವ ಮೊದಲು ಅವರನ್ನು ಹೇಗೆ ನೋಡಿದರು ಮತ್ತು ನಯನತಾರಾ, ವಿಘ್ನೇಶ್ ಅವರನ್ನು ಹೇಗೆ ಇಷ್ಟಪಟ್ಟರು ಎಂಬುದನ್ನು ಹಂಚಿಕೊಂಡಿದ್ದಾರೆ. ನಾವು ಪಾಂಡಿಚೇರಿಯ ರಸ್ತೆಗಳಲ್ಲಿ ಶೂಟಿಂಗ್ ಮಾಡುತ್ತಿದ್ದೆವು ಮತ್ತು ನಾನು ನನ್ನ ಭಾಗದ ಶೂಟಿಂಗ್ಗಾಗಿ ರಸ್ತೆಯಲ್ಲೇ ಕಾಯುತ್ತಿದ್ದೆ. ಈ ವೇಳೆ ವಿಜಯ್ ಸೇತುಪತಿ ಸರ್ ಜೊತೆಗಿನ ದೃಶ್ಯದ ಬಗ್ಗೆ ವಿಕ್ಕಿ (ವಿಘ್ನೇಶ್ ಶಿವನ್) ಮಾತನಾಡುವುದನ್ನು ನಾನು ನೋಡಿದೆ. ಆಗ ಅವರು ನನಗೆ ವಿಭಿನ್ನವಾಗಿ ಕಾಣಿಸಿದರು. ನಾನು ಕೂಡ ಅವರನ್ನು ವಿಭಿನ್ನವಾಗಿ ನೋಡಿದೆ. ಆಗ ನನ್ನ ತಲೆಗೆ ಬಂದ ಮೊದಲ ಯೋಚನೆ ಅಂದರೆ, ಅವರು ಮುದ್ದಾದ ವ್ಯಕ್ತಿ ಅನಿಸಿದರು ಎಂದು ನಯನತಾರಾ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ವಿಘ್ನೇಶ್ ಕೂಡ ಮಾತನಾಡಿದ್ದು, ಶೂಟಿಂಗ್ ಮುಗಿದ ಬಳಿಕ ನಾನು ಈ ಸೆಟ್ ಅನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ನಯನತಾರಾ ಅವರು ಹೇಳಿದರು. ನಾವು ಕೂಡ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಮೇಡಂ ಎಂದು ಹೇಳಿದೆ. ನಾನು ಸುಳ್ಳು ಹೇಳಲು ಬಯಸುವುದಿಲ್ಲ. ಯಾರಾದರೂ ಚೆನ್ನಾಗಿರುವ ಹುಡುಗಿಯರನ್ನು ಕಂಡಾಗ ಅವರ ಬಗ್ಗೆ ಮನಸ್ಸಿನಲ್ಲೇ ಮಾತನಾಡಿಕೊಳ್ಳುತ್ತೇವೆ. ಆದರೆ, ನಯನತಾರಾ ಮೇಡಂ ಅವರನ್ನು ಆ ರೀತಿ ನೋಡಲೇ ಇಲ್ಲ ಎಂದು ವಿಘ್ನೇಶ್ ಹೇಳಿದರು. ಇಬ್ಬರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದು, ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯಬೇಕಾದರೆ ನ.18ರಂದು ಬಿಡುಗಡೆಯಾಗುವ ನಯನತಾರಾ-ವಿಘ್ನೇಶ್ ಅವರ ಮದುವೆ ಡಾಕ್ಯುಮೆಂಟರಿಯನ್ನು ನೋಡಬೇಕಾಗುತ್ತದೆ.
ಅಂದಹಾಗೆ ಇಬ್ಬರ ಮದುವೆಗೆ ನೆಟ್ಫ್ಲಿಕ್ಸ್ ಹಣ ಖರ್ಚು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಮದುವೆಗೆ ಬಂದ ಅತಿಥಿಗಳಿಗೆ ಕೊಠಡಿಗಳು, ಕಾರ್ಯಕ್ರಮದ ಅಲಂಕಾರ, ವಧು-ವರರ ಮೇಕಪ್, ಭದ್ರತೆ ಸೇರಿದಂತೆ ಬಹುತೇಕ ವ್ಯವಸ್ಥೆಯನ್ನು ನೆಟ್ಫ್ಲಿಕ್ಸ್ ಮಾಡಿತ್ತು. ಗಮನಾರ್ಹ ಸಂಗತಿಯೆಂದರೆ, ಪ್ರತಿ ಊಟಕ್ಕೆ 3500 ಸಾವಿರ ರೂಪಾಯಿಯಂತೆ ಮದುವೆ ಬಂದ ಅತಿಥಿಗಳಿಗೆಲ್ಲ ನೆಟ್ಫ್ಲಿಕ್ಸ್ ಊಟದ ವ್ಯವಸ್ಥೆಯನ್ನೂ ಮಾಡಿತು ಎಂದು ಈ ಹಿಂದೆ ಭಾರಿ ಸುದ್ದಿಯಾಗಿತ್ತು. (ಏಜೆನ್ಸೀಸ್)