ಸೀಬೆಹಣ್ಣು ( Guava ) ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಹಣ್ಣನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ಅಲ್ಲದೆ, ಇದು ಚರ್ಮವನ್ನು ಸಹ ಸುಧಾರಿಸುತ್ತದೆ. ಪೇರಳೆ ಹಣ್ಣು ಅಂತಾನೂ ಕರೆಯುವ ಸೀಬೆಹಣ್ಣಿನಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಪ್ರಸ್ತುತ ಸೀಸನ್ನಲ್ಲಿ ಸೀಬೆಹಣ್ಣು ಹೇರಳವಾಗಿ ಸಿಗುತ್ತದೆ. ಆದಾಗ್ಯೂ, ಎಲ್ಲರೂ ಈ ಹಣ್ಣನ್ನು ತಿನ್ನಲು ಸಾಧ್ಯವಿಲ್ಲ. ಕೆಲವರಿಗೆ ಅಡ್ಡ ಪರಿಣಾಮಗಳು ಉಂಟಾಗುತ್ತವೆ.
ಈ ಆರೋಗ್ಯ ಸಮಸ್ಯೆಗಳಿರುವ ಜನರು ಸೀಬೆಹಣ್ಣನ್ನು ತಿನ್ನಬಾರದು…
ಅಸಿಡಿಟಿ ಸಮಸ್ಯೆ: ನಿಮಗೆ ಹೊಟ್ಟೆಯ ಅಸಿಡಿಟಿ ಅಥವಾ ಗ್ಯಾಸ್ ಸಮಸ್ಯೆ ಇದ್ದರೆ ಪೇರಳೆ ಹಣ್ಣನ್ನು ಸೇವಿಸಬಾರದು. ಈ ಹಣ್ಣಿನಲ್ಲಿರುವ ಆಮ್ಲ ಮತ್ತು ಫೈಬರ್ ಅಂಶ ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಉರಿಯೂತ ಮತ್ತು ಅಸ್ವಸ್ಥತೆ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿಂದರೆ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ.
ಮಲಬದ್ಧತೆ ರೋಗಿಗಳು: ಪೇರಳೆ ಹಣ್ಣು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ, ಇದರ ಬೀಜಗಳನ್ನು ಜಗಿಯುವುದರಿಂದ ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತದೆ. ಪೇರಳೆ ಬೀಜಗಳು ಕರುಳಿಗೆ ಅಂಟಿಕೊಳ್ಳುತ್ತವೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತವೆ.
ಕಿಡ್ನಿ ಸಮಸ್ಯೆ: ಕಿಡ್ನಿ ಸಂಬಂಧಿ ಸಮಸ್ಯೆಗಳಿದ್ದಲ್ಲಿ ಪೇರಳೆ ಹಣ್ಣಿನ ಸೇವನೆಯನ್ನು ಕಡಿಮೆ ಮಾಡಬೇಕು. ಸೀಬೆಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದ್ದು, ಮೂತ್ರಪಿಂಡದ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಕಿಡ್ನಿ ರೋಗಿಗಳು ವೈದ್ಯರನ್ನು ಸಂಪರ್ಕಿಸಿದ ನಂತರವೇ ಇದನ್ನು ಸೇವಿಸಬೇಕು.
ಮಧುಮೇಹ ರೋಗಿಗಳು: ಪೇರಳೆಯಲ್ಲಿ ಸಿಹಿ ಸಹಜ. ಇದನ್ನು ಅತಿಯಾಗಿ ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಮಧುಮೇಹಿಗಳು ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಇದರ ಜೊತೆಗೆ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ.
ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವವರು: ಪೇರಳೆ ಹಣ್ಣು ತಂಪಾಗಿಸುವ ಗುಣವನ್ನು ಹೊಂದಿದೆ. ಇದನ್ನು ತಿಂದರೆ ನೆಗಡಿ, ಕೆಮ್ಮಿನ ಸಮಸ್ಯೆ ಹೆಚ್ಚುತ್ತದೆ. ಆಗಾಗ್ಗೆ ನೆಗಡಿಯಿಂದ ಬಳಲುತ್ತಿರುವವರು ಸೀಬೆಹಣ್ಣನ್ನು ತಿನ್ನಬಾರದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.