ಹೀರೋ ಕೂಡ ಅವರೆ, ವಿಲನ್ ಕೂಡ ಅವರೆ: ಮಂಸೋರೆ

Published on
ಅಪ್ಪು ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಎಲ್ಲರ ಮನದಲ್ಲಿ ಅವರ ನಗು ಮತ್ತು ನೆನಪು ಅಜರಾಮರ. ಅವರು ನಿಧನರಾಗುವ ಮೊದಲು ಹಲವು ಸಿನಿಮಾಗಳನ್ನು ಮಾಡುವುದಾಗಿ ಒಪ್ಪಿಕೊಂಡಿದ್ದರು. ಆದರೆ, ಆ ಸಿನಿಮಾಗಳನ್ನು ಮಾಡಿ ಮುಗಿಸುವ ಮೊದಲೇ ಅಪ್ಪು ಇಲ್ಲವಾಗಿದ್ದಾರೆ. ಹೀಗೆ, ಅಪ್ಪು ಅವರು ಮಾಡಬೇಕಿದ್ದ ಮತ್ತೊಂದು ಸಿನಿಮಾದ ಬಗೆಗಿನ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು, ಪುನೀತ್‌ ಅವರು ಮಾಡಬೇಕಿದ್ದ ಆ ಒಂದು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಬೇಕಿತ್ತಂತೆ ಅಪ್ಪು.
ನಿರ್ದೇಶಕ ಮಂಸೋರೆ ಅವರು ಪುನೀತ್​ ಅವರ ಜೊತೆಗೆ ಒಂದು ಸಿನಿಮಾ ಮಾಡಬೇಕು ಎಂದು ಬಹಳಷ್ಟು ವರ್ಷಗಳ ಹಿಂದೆಯೇ ಒಂದು ಕಥೆ ಸಿದ್ಧ ಮಾಡಿಕೊಂಡಿದ್ದರು. ಮಂಸೋರೆ ಅವರು ಈ ವಿಚಾರವನ್ನು ಬಹಳಷ್ಟು ಬಾರಿ ಹೇಳಿಕೊಂಡಿದ್ದಾರೆ. ಕೆಲವು ಸಮಯದ ಹಿಂದೆ ಈ ಚಿತ್ರದ ಒಂದು ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಸಿನಿಮಾದ ಟೈಟಲ್ 'ಮಿಷನ್ ಕೊಲಂಬಸ್' ಎನ್ನಲಾಗಿತ್ತು. ಇದೇ ಚಿತ್ರದಲ್ಲಿ ಅಪ್ಪು ವಿಲನ್ ಶೇಡ್‌ನಲ್ಲಿ ಕಾಣಿಸಿಕೊಳ್ಳಬೇಕಿತ್ತಂತೆ.
'ಮಿಷನ್ ಕೊಲಂಬಸ್' ಸಿನಿಮಾನಲ್ಲಿ ಪುನೀತ್‌ ಅವರ ಪಾತ್ರವನ್ನು ತುಂಬಾನೇ ವಿಭಿನ್ನವಾಗಿ ರೂಪಿಸಿದ್ದರಂತೆ ನಿರ್ದೇಶಕ ಮಂಸೋರೆ, ಕಥೆಗಾರ ಟಿ.ಕೆ. ದಯಾನಂದ. ಈ ಚಿತ್ರದ ಕಥೆಯನ್ನು ಬರೆಯಲು ತುಂಬಾನೆ ಸಮಯ ತೆಗೆದುಕೊಂಡಿದ್ದರಂತೆ. ಸಿನಿಮಾದಲ್ಲಿ ನಾಯಕ ನಟನ ಪಾತ್ರ ಜೆಮ್ಸ್ ಬಾಂಡ್​ನ ಮಾದರಿಯಲ್ಲಿ ಇರುತ್ತೆ, ಹಾಗೂ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಕೂಡ ತುಂಬಾನೆ ಪ್ರಾಮುಖ್ಯತೆ ಇದೆಯಂತೆ. ನಾಯಕ ನಟನ ಪಾತ್ರಕ್ಕಿಂತಲೂ ವಿಲನ್ ಪಾತ್ರ ತುಂಬಾನೆ ಸ್ಟ್ರಾಂಗ್ ಅಂತೆ. ಹಾಗಾಗಿ, ನಿರ್ದೇಶಕ ಮಂಸೋರೆ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನೇ, ಹೀರೋ ಮತ್ತು ವಿಲನ್ ಅಂದರೆ ಎರಡೂ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು.
ಇದೀಗ, ತಮ್ಮ ಕನಸಿನ ಸಿನಿಮಾದ ಬಗ್ಗೆ ಮಾತನಾಡಿದ ಮಂಸೋರೆ ಅವರು ಅಪ್ಪು ತಮ್ಮ ಸಿನಿಮಾ ಮಾಡುವ ಭರವಸೆ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ ಪುನೀತ್‌ ಅವರು ಬೇರೆ ಚಿತ್ರಗಳಲ್ಲಿ ಬ್ಯೂಸಿ ಇದ್ದ ಕಾರಣ, ಆ ಸಿನಿಮಾಗಳನ್ನು ಮುಗಿಸಿ ಈ ಚಿತ್ರದಲ್ಲಿ ಖಂಡಿತ ಸಿನಿಮಾ ಮಾಡೋಣ ಎಂದು ಅಪ್ಪು ಅವರು ಮಂಸೋರೆಗೆ ಭರವಸೆ ಕೊಟ್ಟರಂತೆ. ಈಗ ಅಪ್ಪು ಇಲ್ಲದ ಕಾರಣ ಸಿನಿಮಾಗೆ ಹೊಸ ನಾಯಕ ನಟನನ್ನು ಹುಡುಕಲು ಕಷ್ಟ ಎಂದು ಕೂಡ ಮಂಸೋರೆ ಹೇಳಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net