ಅಪ್ಪಟ ಕನ್ನಡಿಗರಲ್ಲಿ ಕ್ಷಮೆ ಕೋರಿದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ...

Nayana
Published on

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ನಯನಾ, ಫೇಸ್​ಬುಕ್​ನಲ್ಲಿ ಕನ್ನಡದ ವಿಚಾರಕ್ಕೆ ಸಖತ್​ ಟ್ರೋಲ್​ಗೆ ಒಳಗಾಗಿದ್ದರು. ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದರು. ಇದೀಗ ಅದೆಲ್ಲದಕ್ಕೂ ಪ್ರತಿಕ್ರಿಯಿಸಿದ್ದಾರೆ. ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಜತೆಗೆ ಅದಕ್ಕೊಂದಿಷ್ಟು ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ.

ಈ ಬಗ್ಗೆ ವಿಡಿಯೋವೊಂದನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ಅವರು, ನಾನು ಯಾವುದೇ ಚಾನೆಲ್‌ಗೆ ಹೋದರೂ, ಸಿನಿಮಾಗಳಲ್ಲಿ ಆ್ಯಕ್ಟ್​ ಮಾಡಿದಾಗಲೂ ನಾನು ಇಂಗ್ಲಿಷ್‌ನವಳು, ಇಂಗ್ಲಿಷ್ ವ್ಯಾಮೋಹ ಜಾಸ್ತಿ ಎಂದು ಹೇಳಿಕೊಂಡಿಲ್ಲ. ನಾವು ಕನ್ನಡಿಗರು, ನಮಗೆ ನಮ್ಮ ಬೆಲೆ ಏನು ಎಂದು ಚೆನ್ನಾಗಿ ಗೊತ್ತು. ಎಲ್ಲಿ ಅದನ್ನು ಬಳಸಬೇಕು ಎಂದು ಗೊತ್ತಿದೆ. ಕನ್ನಡವನ್ನು ಅವಶ್ಯಕತೆ ಎಂದು ಬಳಸಿಲ್ಲ. ಅದನ್ನು ಅಧಿಕಾರ ಎಂದೇ ಬಳಸಿದ್ದೇವೆ. ಆ ಕಾಮೆಂಟ್ ಹಾಕಿದ್ದು ವೈಯಕ್ತಿಕವಾಗಿ ಬೇಸರ ಅನಿಸಿತು. ಅದಕ್ಕಾಗಿ ಅವರಿಗೆ ಅಪ್ಪಟ ಕನ್ನಡ ಅಭಿಮಾನಿ ಮುಚ್ಕೊಂಡು ನಿನ್ನ ಕೆಲಸ ನೋಡು ಎಂದು ಹಾಕಿದ್ದೇ ಹೊರತು ಅವರು ಕನ್ನಡದ ಅಭಿಮಾನಿ ಎಂದು ಅಲ್ಲ. ಕ್ರೇಜ್​ಗೋಸ್ಕರ್​ ಈ ರೀತಿ ಮಾಡಿರಬಹುದು ಎಂದೆನಿಸಿತು. ಆತನೂ ಕನ್ನಡದಲ್ಲಿಯೇ ಅದನ್ನು ಕಮೆಂಟ್​ ಮಾಡಿದ್ದರೆ, ನಾನೂ ಅವನು ಕನ್ನಡ ಅಭಿಮಾನಿ ಎಂದು ಒಪ್ಪಿಕೊಳ್ಳುತ್ತಿದೆ.

ಜತೆಗೆ ಫೇಸ್​ಬುಕ್​ ಬಳಕೆದಾರರಿಗೂ ಮನವಿ ಮಾಡಿರುವ ನಯನಾ, ‘ದಯವಿಟ್ಟು ದುರಹಂಕಾರ, ಕೊಬ್ಬು ಜಾಸ್ತಿ ಎಂಬೆಲ್ಲ ಪದ ಪ್ರಯೋಗ ಮಾಡಬೇಡಿ. ನೀವು ಹೇಳುವಂತೆ ನಾನು ಆ ಥರ ಇಲ್ಲ. ನನ್ನಂತೆ ನಿಮ್ಮ ಮನೆಯಲ್ಲಿಯೂ ಹೆಣ್ಣುಮಕ್ಕಳಿರುತ್ತಾರೆ. ಮತ್ತೆ ಕನ್ನಡದ ಬಗ್ಗೆ ನಾನು ಇಲ್ಲಿಯವರೆಗೂ ಏನೂ ಮಾತನಾಡಿಲ್ಲ. ಕನ್ನಡವನ್ನು ನಿರ್ಲಕ್ಷ ಮಾಡಿದ್ದೀನಿ ಎನ್ನುತ್ತಿದ್ದರೆ ಸೂಕ್ತ ಸಾಕ್ಷ್ಯ ನೀಡಿ. ಈ ಮೂಲಕ ನನ್ನಿಂದ ಏನಾದರೂ ತಪ್ಪಾದರೆ ಕನ್ನಡದ ಅಪ್ಪಟ ಅಭಿಮಾನಿಗಳಿಗೆ ಕ್ಷಮೆ ಕೋರುತ್ತಿದ್ದೇನೆ. ಬೈಗುಳಗಳ ಮೂಲಕ ಕಮೆಂಟ್​ ಮಾಡಿದವರಿಗೆ ಬೇರೆ ರೀತಿಯಲ್ಲಿ ಉತ್ತರ ನೀಡಲಿದ್ದೇನೆ’ ಅಂತಲೂ ಹೇಳಿಕೊಂಡಿದ್ದಾರೆ ನಯನಾ.

ಅಂದಹಾಗೆ, ಫೋಟೋವೊಂದಕ್ಕೆ ಇಂಗ್ಲಿಷ್​ನಲ್ಲಿ ಕ್ಯಾಪ್ಶನ್​ ಬರೆದಿದ್ದಕ್ಕೆ ಒಂದಷ್ಟು ನೆಟ್ಟಿಗರು, ಕನ್ನಡದಲ್ಲಿಯೇ ಕಮೆಂಟ್​ ಮಾಡುವಂತೆ ಕೋರಿದ್ದರು. ಪ್ರತಿಯಾಗಿ, ‘ಫೇಮಸ್​ ಆಗೋತನ ಕನ್ನಡ ಬೇಕು. ಆದಮೇಲೆ ಇಂಗ್ಲಿಷ್​’ ಎಂಬ ಕಮೆಂಟ್​ಗೆ ‘ಅಪ್ಪ ಕನ್ನಡದ ಭಕ್ತ, ಮುಚ್ಕೊಂಡು ನಿನ್​ ಕೆಲ್ಸ ನೋಡ್ಕೊ’ ಎಂದು ನಯನಾ ಪ್ರತಿಕ್ರಿಯಿಸಿದ್ದರು. ಅವರು ಹಾಗೆ ಉತ್ತರಿಸುತ್ತಿದ್ದಂತೆ ಸಾಕಷ್ಟು ಮಂದಿ ನಯನ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net