ಸುಶಾಂತ್​ ಸಿಂಗ್​ ಸಾವಿನ ಬಗ್ಗೆ ಮೌನ ಮುರಿದ ಸುದೀಪ್​!

collage (34)
Published on

ಸುಶಾಂತ್​ ಸಿಂಗ್​ ಆತ್ಮಹತ್ಯೆ ವಿಚಾರವಾಗಿ ಈಗಾಗಲೇ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕುಟುಂಬದವರು, ಹಿತೈಷಿಗಳು, ಮನೆಗೆಲಸದವರು… ಹೀಗೆ 30ಕ್ಕೂ ಹೆಚ್ಚು ಜನರನ್ನು ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಪೊಲೀಸರು ಸಂಗ್ರಹಿಸುತ್ತಿರುವ ಮಾಹಿತಿ ಒಂದೆಡೆಯಾದರೆ, ಸೋಷಿಯಲ್​ ಮೀಡಿಯಾದಲ್ಲಿ ಸುಶಾಂತ್​ ಸಾವು ಬೇರೆ ಬೇರೆ ಮಗ್ಗುಲಲ್ಲಿ ಚರ್ಚೆಗೊಳಪಡುತ್ತಿದೆ. ಇದು ಸಹಜ ಸಾವಲ್ಲ ಎಂದು ಒಂದಷ್ಟು ಮಂದಿ ಹೇಳಿದರೆ, ಇನ್ನು ಕೆಲವರು ಈ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಹೀಗಿರುವಾಗಲೇ ಕಿಚ್ಚ ಸುದೀಪ್​ ಸುಶಾಂತ್​ ಸಿಂಗ್​ ಸಾವಿನ ಬಗ್ಗೆ ಮೌನ ಮುರಿದಿದ್ದಾರೆ.

‘ಇದು ಆತ್ಮಹತ್ಯೆಯಲ್ಲ ಪಕ್ಕಾ ಪೂರ್ವನಿಯೋಜಿತ ಕೊಲೆ’ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಸುದೀಪ್​ ಸಹ ಅದೇ ಮಾತನ್ನೇ ಹೇಳುತ್ತಾರೆ. 'ಸುಶಾಂತ್ ಸಿಂಗ್​ ಕರಿಯರ್​ನಲ್ಲಿ ಸಕ್ಸಸ್​​​ಫುಲ್ ಆಗಿದ್ದವರು. ಇಲ್ಲದಿದ್ದರೆ ಯಾರಿಗೆ ತಾನೇ ಅವರ ಬಗ್ಗೆ ಗೊತ್ತಾಗುತ್ತಿತ್ತು. ನನಗನಿಸಿದ ಮಟ್ಟಿಗೆ ಕೇವಲ ಸೋಲಿನಿಂದ ಈ ಸಾವು ಸಂಭವಿಸಿಲ್ಲ. ಬೇರೇನೋ ಬಲವಾದ ಕಾರಣ ಇದರ ಹಿಂದಿದೆ’ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಹಿಂದಿಯ ವೆಬ್​ಸೈಟ್​ವೊಂದಕ್ಕೆ ಸಂದರ್ಶನ ನೀಡಿದ್ದ ವೇಳೆ ಈ ಮಾತನ್ನು ಹೇಳಿಕೊಂಡಿರುವ ಸುದೀಪ್​, ‘ನಾನು ನನ್ನ ಕುಟುಂಬದ ಜತೆಗೆ ಬ್ಯಾಂಕಾಕ್​ಗೆ ಹೋದಾಗ, ಏರ್​ಪೋರ್ಟ್​ನಲ್ಲಿ ಸುಶಾಂತ್ ಕಾಣಿಸಿದ್ದರು. ಸದಾ ಹಸನ್ಮುಖಿ ಮನುಷ್ಯ. ಅವರ ಜತೆ ನನ್ನನ್ನೂ ಸೇರಿ ಕುಟುಂಬದವರೆಲ್ಲರೂ ಫೋಟೋ ತೆಗೆಸಿಕೊಂಡೆವು. ಒಂದು ವೇಳೆ ಆತ ಯಶಸ್ಸು ಕಂಡಿರದಿದ್ದರೆ, ಜನ ಗುರುತಿಸಲ್ಲ ಅಂದ್ರೆ, ಪ್ರೀತಿಸಲ್ಲ ಅಂದ್ರೆ ಯಾರಾದ್ರೂ ಯಾಕೆ ಹೋಗಿ ಅವರ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ? ಅಲ್ಲವೇ’ ಎನ್ನುತ್ತಾರೆ ಸುದೀಪ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net