ಮಹೇಶ್ ಬಾಬು ಸಿನಿಮಾದಲ್ಲಿ ನಟಿಸುವ ಬಗ್ಗೆ ಕಿಚ್ಚ ಸುದೀಪ್​ ಕಡೆಯಿಂದ ಬಂತು ಉತ್ತರ!

Sudeep
Published on

ಬೆಂಗಳೂರು: ಮಹೇಶ್ ಬಾಬು ಅಭಿನಯದ ‘ಸರ್ಕಾರಿ ವಾರು ಪಾಟ’ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಸುದೀಪ್ ಅವರಿಗೆ ಆಫರ್ ನೀಡಲಾಗಿದೆ ಎಂಬಂತಹ ಸುದ್ದಿಗಳು ಕಳೆದ ಕೆಲ ವಾರಗಳಿಂದ ಕೇಳಿ ಬರುತ್ತಿವೆ. ಆದರೆ, ಸುದೀಪ್ ಅವರ ಕಡೆಯಿಂದ ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ಇದುವರೆಗೂ ಬಂದಿರಲಿಲ್ಲ. ಹಾಗಾಗಿ ಅವರು ಈ ಚಿತ್ರದಲ್ಲಿ ನಟಿಸುತ್ತಾರೋ, ಇಲ್ಲವೋ ಎಂಬುದು ಅಧಿಕೃತವಾಗಿರಲಿಲ್ಲ. ಇದೀಗ ಆ ಚಿತ್ರದ ಬಗ್ಗೆ ಸುದೀಪ್​ ಪ್ರತಿಕ್ರಿಯಿಸಿದ್ದಾರೆ.

ಹಿಂದಿ ವೆಬ್​ಸೈಟ್​ವೊಂದಕ್ಕೆ ಸಂದರ್ಶನ ನೀಡಿರುವ ನಟ ಸುದೀಪ್​, ಮಹೇಶ್​ ಬಾಬು ಸಿನಿಮಾಕ್ಕೆ ಸಂಬಂಧಪಟ್ಟ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ನೀವು ಮಹೇಶ್​ ಬಾಬು ಸಿನಿಮಾದಲ್ಲಿ ನಟಿಸುತ್ತಿದ್ದೀರಾ? ಎಂಬ ಪ್ರಶ್ನೆ ಕೇಳುತ್ತಿದ್ದಂತೆ. ‘ಹಾಗೇನು ಇಲ್ಲ. ಯಾವುದೂ ಇನ್ನೂ ಅಧಿಕೃತವಾಗಿಲ್ಲ. ಎಲ್ಲವೂ ಮಾತುಕತೆ ಹಂತದಲ್ಲಿದೆ. ಅಧಿಕೃತವಾದರೆ ನಾನೇ ತಿಳಿಸುವೆ ಎಂದಿದ್ದಾರೆ. ಈ ಮೂಲಕ ಹರಿದಾಡುತ್ತಿರುವ ಸುದ್ದಿಗೆ ಸುದೀಪ್​ ಉತ್ತರ ನೀಡಿದ್ದಾರೆ.

ಇನ್ನು ಸುದೀಪ್ ಅವರಿಗೆ ಆಫರ್ ಬಂದಿರುವುದು ಕೇವಲ ‘ಸರ್ಕಾರಿ ವಾರು ಪಾಟ’ ಚಿತ್ರದಿಂದ ಮಾತ್ರವಲ್ಲ. ದಕ್ಷಿಣ ಭಾರತದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’, ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಮತ್ತು ಸಿಂಬು ಅಭಿನಯದ ‘ಮಾನಾಡು’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುವುದಕ್ಕೆ ಆಫರ್ ಬಂದಿದೆಯಂತೆ. ಈಗಾಗಲೇ ಈ ನಾಲ್ಕು ಚಿತ್ರತಂಡದವರು, ಸುದೀಪ್ ಅವರನ್ನು ಸಂರ್ಪಸಿ, ಚಿತ್ರದಲ್ಲಿ ನಟಿಸುವುದಕ್ಕೆ ಕೇಳಿಕೊಂಡಿದ್ದಾರಂತೆ.

ಈಗಾಗಲೇ ‘ಅಣ್ಣಾತ್ತೆ’ ಮತ್ತು ‘ಇಂಡಿಯನ್ 2’ ಚಿತ್ರಗಳ ಅರ್ಧ ಚಿತ್ರೀಕರಣ ಮುಗಿದಿದೆ. ಇನ್ನು ‘ಮಾನಾಡು ಮತ್ತು’ ‘ಸರ್ಕಾರಿ ವಾರು ಪಾಟ’ ಚಿತ್ರಗಳ ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ. ಬಹುಶಃ ಲಾಕ್​ಡೌನ್ ಇಲ್ಲದಿದ್ದರೆ, ಇಷ್ಟರಲ್ಲಿ ಸುದೀಪ್ ಯಾವ ಚಿತ್ರಗಳಲ್ಲಿ ನಟಿಸುತ್ತಾರೆ ಎಂಬುದರ ಸ್ಪಷ್ಟ ಚಿತ್ರಣ ಸಿಗುತಿತ್ತು. ಆದರೆ, ಈಗ ಹಾಗಿಲ್ಲ. ಚಿತ್ರೀಕರಣ ಮಾಡುವುದಕ್ಕೆ ಪೂರ್ಣಪ್ರಮಾಣವಾದ ಅನುಮತಿ ಸಿಕ್ಕರೆ, ಈ ನಾಲ್ಕೂ ಚಿತ್ರಗಳ ಚಿತ್ರೀಕರಣ ಶುರುವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net