ದಕ್ಷಿಣದ ಈ ಚಿತ್ರೋದ್ಯಮವೇ ಭಾರತದ ನಂ.1; ಬಾಲಿವುಡ್​ ಅಲ್ವೇ ಅಲ್ಲ ಅಂತಾರೆ ಕಂಗನಾ

Ranaut
Published on

ಮುಂಬೈ: ಬಾಲಿವುಡ್​ ನಟಿ ಕಂಗನಾ ಹಲವು ಹೇಳಿಕೆ ಮೂಲಕ ವಿವಾದದ ತುತ್ತ ತುದಿಯಲ್ಲಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡುತ್ತ ಕಾಂಟ್ರವರ್ಸಿ ಸೃಷ್ಟಿಸುತ್ತಿದ್ದಾರೆ. ಬಾಲಿವುಡ್​ ಚಿತ್ರರಂಗದ ವಿರುದ್ಧವೂ ಹರಿಹಾಯ್ದಿದ್ದಾರೆ. ಇದೀಗ ಇದೇ ನಟಿ ಸೌತ್​ ಚಿತ್ರರಂಗವನ್ನು ಕೊಂಡಾಡಿದ್ದಾರೆ.

ಹೌದು, ಇತ್ತೀಚೆಗಷ್ಟೇ ಉತ್ತರಪ್ರದೇಶದಲ್ಲಿ ದೇಶವೇ ತಿರುಗಿ ನೋಡುವಂತೆ ಫಿಲಂ ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದರು. ಅವರ ಹೇಳಿಕೆಯನ್ನು ರೀ ಟ್ವಿಟ್​ ಮಾಡಿಕೊಂಡ ಕಂಗನಾ, ‘ಜನಗಳ ದೃಷ್ಟಿಯಲ್ಲಿ ಟಾಪ್​ ಇಂಡಸ್ಟ್ರಿ ಅಂದರೆ ಅದು ಬಾಲಿವುಡ್​ ಅಂತ. ಆದರೆ, ಅಸಲಿಗೆ ಅದೆಲ್ಲ ಸುಳ್ಳು. ನಿಜ ಹೇಳಬೇಕೆಂದರೆ, ಟಾಲಿವುಡ್​ ಚಿತ್ರೋದ್ಯಮವೇ ಭಾರತದಲ್ಲಿ ನಂ.1 ಸ್ಥಾನದಲ್ಲಿದೆ’ ಎಂದಿದ್ದಾರೆ.

ಅಷ್ಟೇ ಅಲ್ಲ ತಮ್ಮ ಹೇಳಿಕೆಗೆ ಸೂಕ್ತ ವಿವರಣೆಯನ್ನೂ ನೀಡಿದ್ದಾರೆ ಕಂಗನಾ. ‘ಸದ್ಯದ ಮಟ್ಟಿಗೆ ನೋಡಿದರೆ, ಪ್ಯಾನ್​ ಇಂಡಿಯಾ ಪರಿಕಲ್ಪನೆಯ ಸಿನಿಮಾಗಳು ಟಾಲಿವುಡ್​ನಲ್ಲಿ ಹೆಚ್ಚೆಚ್ಚು ಸೃಷ್ಟಿಯಾಗುತ್ತಿವೆ. ಅದರಲ್ಲೂ ಹೈದರಾಬಾದ್​ನಲ್ಲಿರುವ ರಾಮೋಜಿ ಫಿಲಂ ಸಿಟಿಯಲ್ಲಿ ಭಾರತದ ಬಹುತೇಕ ಸಿನಿಮಾಗಳು ಶೂಟ್​ ಆಗುತ್ತವೆ. ಹಾಗಾಗಿ ನನ್ನ ಪ್ರಕಾರ ಭಾರತದ ನಂ. 1 ಸಿನಿಮಾ ಇಂಡಸ್ಟ್ರಿ ಅಂದರೆ ಅದು ಟಾಲಿವುಡ್​ ಮಾತ್ರ’ ಎಂದಿದ್ದಾರೆ.

ಇದೇ ವೇಳೆ ಸದ್ಯದ ಭಾರತ ಸಿನಿಮಾರಂಗದ ಸ್ಥಿತಿ ಹೇಗಿದೆ ಎಂಬುದರ ಬಗ್ಗೆಯೂ ಮಾತನಾಡಿರುವ ಕಂಗನಾ, ಅತ್ಯುತ್ತಮವಾಗಿ ಡಬ್​ ಆದ ಭಾರತೀಯ ಸಿನಿಮಾಗಳಿಗೆ ಸಿಗದ ಮನ್ನಣೆ, ಡಬ್ ಆದ ಹಾಲಿವುಡ್​ ಚಿತ್ರಗಳಿಗೆ ಸಿಗುತ್ತಿದೆ. ಹಾಗಾಗಿ ಆ ಹಾವಳಿಯನ್ನು ತಪ್ಪಿಸಲು ಮೊದಲು ಮುಂದಾಗಬೇಕು ಎಂದು ಆದಿತ್ಯನಾಥ್​ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಅಂದಹಾಗೆ ತೆಲುಗಿನಲ್ಲಿ ಪ್ರಭಾಸ್​ ಜತೆಗೆ ಏಕ್​ ನಿರಂಜನ್​ ಮತ್ತು ತಮಿಳಿನಲ್ಲಿ ಧಾಮ್​ ಧೂಮ್​ ಸಿನಿಮಾದಲ್ಲಿ ಕಂಗನಾ ನಟಿಸಿದ್ದರು.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net