ಅನುಷ್ಕಾಗೆ ಡಿವೋರ್ಸ್​ ನೀಡಿ; ಕ್ರಿಕೆಟಿಗ ಕೊಹ್ಲಿಗೆ ಬಿಜೆಪಿ ಎಂಎಲ್​ಎಯಿಂದ ಕೋರಿಕೆ!

Anushka
Published on

‘ಪಾತಾಳ್ ಲೋಕ್’ ವೆಬ್​ ಸರಣಿ ಸದ್ಯ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಒಂದಷ್ಟು ಮಂದಿ ಸಿರೀಸ್ ಮೂಡಿ ಬಂದ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಬ್ಯಾನ್ ಮಾಡುವಂತೆಯೂ ಆಗ್ರಹಿಸುತ್ತಿದ್ದಾರೆ. ಇದೆಲ್ಲದರ ನಡುವೆ ಈ ವೆಬ್ ಸರಣಿಯನ್ನು ನಿರ್ಮಾಣ ಮಾಡಿದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿರುದ್ಧ ಮೇಲಿಂದ ಮೇಲೆ ದೂರುಗಳೂ ದಾಖಲಾಗುತ್ತಿವೆ. ಇದೀಗ ಉತ್ತರ ಪ್ರದೇಶದ ಲೋನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜಾರ್, ಅನುಷ್ಕಾ ಶರ್ಮಾ ವಿರುದ್ಧ ದೂರು ನೀಡಿದ್ದಾರೆ. ಅಷ್ಟೇ ಅಲ್ಲ, ‘ಪಾತಾಳ್ ಲೋಕ್’ ವೆಬ್​ ಸರಣಿ ನಿರ್ಮಾಣ ಮಾಡಿದ ಅನುಷ್ಕಾ ಶರ್ಮಾಗೆ ಕೂಡಲೇ ವಿಚ್ಛೇದನ ನೀಡಿ ಎಂದು ವಿರಾಟ್ ಕೊಹ್ಲಿಗೆ ಮನವಿ ಮಾಡಿದ್ದಾರೆ.

ಹೌದು, ಅಷ್ಟಕ್ಕೂ ಹೀಗೆ ದೂರು ನೀಡಲು ಕಾರಣ, ವೆಬ್‌ಸರಣಿಯಲ್ಲಿ ಶಾಸಕ ನಂದಕಿಶೋರ್ ಫೋಟೋ ಬಳಕೆ. ಶಾಸಕರ ಅನುಮತಿ ಪಡೆಯದೇ ಸರಣಿಯಲ್ಲಿ ಅವರ ಫೋಟೋ ಬಳಿಸಿಕೊಂಡಿದ್ದರಿಂದ ಗಾಜಿಯಾಬಾದ್ ಠಾಣೆಯಲ್ಲಿ ನಂದಕಿಶೋರ್ ದೂರು ನೀಡಿದ್ದು, ‘ಪಾತಾಳ ಲೋಕ್’ ಬ್ಯಾನ್‌ಗೂ ಆಗ್ರಹಿಸಿದ್ದಾರೆ. ‘ದೇಶಕ್ಕಿಂತ ಹೆಚ್ಚಿನದು ಮತ್ತೊಂದಿಲ್ಲ. ಕೊಹ್ಲಿ ದೇಶಕ್ಕೋಸ್ಕರ ಆಡುತ್ತಾರೆ. ಅವರೊಬ್ಬ ಅಪ್ಪಟ ದೇಶ ಭಕ್ತ. ಹಾಗಾಗಿ ಈ ಕ್ಷಣದಲ್ಲೇ ಪಾತಾಳ ಲೋಕ ರೀತಿಯ ಸಿನಿಮಾ ನಿರ್ಮಿಸುವ ನಿಮ್ಮ ಪತ್ನಿ ಅನುಷ್ಕಾಗೆ ವಿಚ್ಛೇದನ ನೀಡಬೇಕು’ ಎಂದಿರುವ ನಂದಕಿಶೋರ್, ವೆಬ್ ಸರಣಿ ಬ್ಯಾನ್ ಮಾಡುವಂತೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್‌ಗೂ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

ಇತ್ತೀಚೆಗಷ್ಟೇ ವೆಬ್ ಸರಣಿಯಲ್ಲಿ ತಮ್ಮ ಸಮುದಾಯದ ವಿರುದ್ಧ ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ ಎಂದು ಆರೋಪಿಸಿ ಅರುಣಾಚಲ ಪ್ರದೇಶ ಗೋರ್ಖಾ ಯೂಥ್ ಅಸೋಸಿಯೇಷನ್, ಕಳೆದ ಸೋಮವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿತ್ತು. ಇದೀಗ ಒಂದೊರ ಮೇಲೊಂದರಂತೆ ವಿರೋಧಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net