

ಸಿನಿಮಾ ನಿರ್ಮಾಣದ ಫ್ಯಾಕ್ಟರಿ ಎಂದೇ ರಾಮ್ಗೋಪಾಲ್ ವರ್ಮಾ ಅವರನ್ನು ಎಲ್ಲರು ಕರೆಯುವುದುಂಟು. ಪ್ರಸ್ತುತತೆಗೆ ಅದೆಷ್ಟು ಹತ್ತಿರ ಅಂದರೆ, ಯಾವುದೇ ಘಟನೆ ನಡೆದರೆ ಅದಕ್ಕೆ ಸಂಬಂಧಿಸಿದ ಸಿನಿಮಾ ಅವರ ಬತ್ತಳಿಕೆಯಲ್ಲಿ ಸಿದ್ಧವಾಗುತ್ತಿದೆ ಎಂದೇ ಅರ್ಥ. ಅದಕ್ಕೆ ಸಾಕ್ಷಿ ಎಂಬಂತೆ ಇದೀಗ, ಲಾಕ್ಡೌನ್ ಹೊತ್ತಲ್ಲೇ ‘ಕರೊನಾ ವೈರಸ್’ ಶೀರ್ಷಿಕೆಯ ಸಿನಿಮಾ ಮಾಡಿದ್ದಾರೆ. ಅದರ ಟ್ರೇಲರ್ ಸಹ ಬಿಡುಗಡೆಯಾಗಿದ್ದು, ಬಾಲಿವುಡ್ ಬಿಗ್ ಅಮಿತಾಬ್ ಬಚ್ಚನ್ ಸೇರಿ ಹಲವರು ಆರ್ಜಿವಿಯ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ರಾಗಿಣಿ ಹುಟ್ಟುಹಬ್ಬದ ಸ್ಪೆಷಾಲಿಟಿ ಇದು …
ಮೊದ ಮೊದಲಿಗೆ ಟ್ರೇಲರ್ ನೋಡಿದಾಗ ಇದು ಹಾರರ್ ಸಿನಿಮಾನಾ ಎಂದು ಅನಿಸದೆ ಇರದು. ಆ ಅನುಮಾನಕ್ಕೂ ಉತ್ತರಿಸಿರುವ ಆರ್ಜಿವಿ, ‘ಕರೊನಾ ವೈರಸ್ ಇದು ಹಾರರ್ ಸಿನಿಮಾ ಅಲ್ಲ ಬದಲಿಗೆ ಇದು ಬೇರೆ ರೀತಿಯಲ್ಲಿಯೇ ಹೆದರಿಸಲಿದೆ’ ಎಂದಿದ್ದಾರೆ. ಕರೊನಾ ರೋಗಲಕ್ಷಣವಾದ ಕೆಮ್ಮನ್ನೇ ಪ್ರಧಾನವಾಗಿಟ್ಟುಕೊಂಡು ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಒಂದು ಕೆಮ್ಮು ಇಡೀ ಕುಟುಂಬದವರನ್ನು ಹೇಗೆಲ್ಲ ಭಯಬೀಳಿಸುತ್ತದೆ ಎಂಬುದು ಟ್ರೇಲರ್ನಲ್ಲಿದೆ.
ಲಾಕ್ಡೌನ್ ಹೊತ್ತಲ್ಲಿ ಶೂಟಿಂಗ್ ಮಾಡಿದ ಬಗೆಯನ್ನೂ ಆರ್ಜಿವಿ ಹೇಳಿಕೊಂಡಿದ್ದಾರೆ. ‘ಸಾಮಾಜಿಕ ಅಂತರ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡೇ ಈ ಸಿನಿಮಾ ಶೂಟಿಂಗ್ ಮಾಡುತ್ತಿದ್ದೇವೆ. ಜೀಸಸ್, ಈಶ್ವರ್, ಅಲ್ಲಾ ಮತ್ತು ಸರ್ಕಾರದ ಮೇಲೆ ಆಣೆಗೂ’ ಎಂದಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಟ್ರೇಲರ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. (ಏಜೆನ್ಸೀಸ್)