ರಿಯಾ ವಿರುದ್ಧ ಎಫ್​ಐಆರ್​; ‘ಸತ್ಯಕ್ಕೆ ಜಯ’ ಎಂದ ಸುಶಾಂತ್​ ಮಾಜಿ ಪ್ರೇಯಸಿ ಅಂಕಿತಾ!

Ankita
Published on

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹಲವು ಮಂದಿಯನ್ನು ಮುಂಬೈ ಪೊಲೀಸ್​ ವಿಚಾರಣೆ ನಡೆಸುತ್ತಿದೆ. ಇತ್ತ ನಿನ್ನೆಯಷ್ಟೇ ಹೊಸದಾಗಿ ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ ಮೇಲೆ ಕೇಸ್​ ಕೂಡ ದಾಖಲಾಗಿದೆ. ಸುಶಾಂತ್​ ಆತ್ಮಹತ್ಯೆಗೆ ರಿಯಾಳೇ ಪರೋಕ್ಷ ಕಾರಣವೆಂದು ಆಪಾದನೆ ಮಾಡಿ ದೂರು ನೀಡಲಾಗಿದೆ. ಸೋಷಿಯಲ್​ ಮೀಡಿಯಾದಲ್ಲೂ ಈ ವಿಚಾರ ಬಹು ಚರ್ಚೆಯಾಗುತ್ತಿದ್ದು, ತನಿಖೆಗೆ ಆದೇಶಿಸಲಾಗಿದೆ. ರಿಯಾ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ, ಎಂದೂ ಮಾತನಾಡದ ಒಂದಷ್ಟು ಮಂದಿ ದನಿಗೂಡಿಸುತ್ತಿದ್ದಾರೆ.

ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ, ಇದೀಗ ಮತ್ತೆ ಸುಶಾಂತ್​ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ರಿಯಾ ವಿರುದ್ಧ ಬಿಹಾರದ ಪಾಟ್ನಾದಲ್ಲಿ ದೂರು ದಾಖಲಾಗುತ್ತಿದ್ದಂತೆ, ಸೊಷಿಯಲ್​ ಮೀಡಿಯಾದಲ್ಲಿ ‘ಸತ್ಯಕ್ಕೆ ಜಯ’ ಎಂದು ದೊಡ್ಡದಾಗಿ ಬರೆದುಕೊಂಡಿದ್ದಾರೆ. ಸತತ ಆರು ವರ್ಷಗಳ ಕಾಲ ರಿಲೇಷನ್​ಶಿಪ್​ನಲ್ಲಿದ್ದ ಅಂಕಿತಾ ಮತ್ತು ಸುಶಾಂತ್​, 2016ರಲ್ಲಿ ಬೇರೆ ಬೇರೆಯಾಗಿದ್ದರು. ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿ ಮನೆಮಾತಾಗಿದ್ದರು.

ಹೀಗೆ ಅಂಕಿತಾ ಬಳಿಕ ಸುಶಾಂತ್​ ಜೀವನಕ್ಕೆ ಎಂಟ್ರಿ ಕೊಟ್ಟಿದ್ದು ರಿಯಾ. ಇದೀಗ ಸುಶಾಂತ್​ ಸಾವಿಗೆ ರಿಯಾಳೇ ಕಾರಣ ಎಂದು ಆರೋಪಿಸಿ ಸುಶಾಂತ್​ ತಂದೆ ಕೆಕೆ ಸಿಂಗ್​ ಪಾಟ್ನಾದ ರಾಜೀವ್​ ನಗರದ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.ರಿಯಾ ಮೇಲೆ ಎಫ್​ಐಆರ್ ದಾಖಲಾಗಿದ್ದೇ ತಡ, ಮಾಜಿ ಪ್ರಿಯತಮೆ ಅಂಕಿತಾ ಸತ್ಯಕ್ಕೆ ಜಯ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ.

ಇನ್ನು ನವಾಜುದ್ದೀನ್​ ಸಿದ್ಧೀಕಿ ಸಹೋದರ ಶಮಸ್​ ನವಾಬ್​ ಸಿದ್ಧೀಕಿ ಸಹ ರಿಯಾ ವಿರುದ್ಧ ಬ್ಯಾಟ್ ಬೀಸಿ, ಟ್ವಿಟರ್​ನಲ್ಲಿ ರಿಯಾ ವಿರುದ್ಧ ಖಡಕ್​ ಮಾತುಗಳಿಂದಲೇ ತರಾಟೆ ತೆಗೆದುಕೊಂಡಿದ್ದರು. ‘ನಮ್ಮ ನಡುವೆ ರಿಯಾ ಚಕ್ರವರ್ತಿ ರೀತಿಯ ಜನರೇ ಹೆಚ್ಚಿದ್ದಾರೆ. ಅವರ ಕೆಲಸವೇ ಬ್ಲಾಕ್​ಮೇಲ್​ ಮಾಡುವುದು. ಬೇರೊಬ್ಬರ ಶ್ರಮ ಮತ್ತು ಘನತೆಯ ಮೇಲೆ ನೀರು ಸುರಿಯುತ್ತಾರೆ. ಹಣ ಸೇರಿ ಎಲ್ಲವನ್ನು ದೋಚುತ್ತಾರೆ’ ಎಂದು ರಿಯಾ ವಿರುದ್ಧ ಹರಿಹಾಯ್ದಿದ್ದರು (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net