

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಮತಾಂತರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಹಣಬಲದಿಂದ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎಂದು ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದರೇ ಆರೋಪಿಸಿದ್ದಾರೆ.
ಆಂಧ್ರದಲ್ಲಿ ದೊಡ್ಡ ಮಟ್ಟದಲ್ಲಿ ಮತಾಂತರ ನಡೆಯುತ್ತಿರುವುದು ಸತ್ಯ, ಇದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ನಮ್ಮ ಸರ್ಕಾರ ಬರುವುದಕ್ಕೆ ಮುಂಚೆಯೂ ಇಲ್ಲಿ ಮತಾಂತರ ನಡೆಯುತ್ತಿತ್ತು. ಈಗಲೂ ಮಿಷನರಿಗಳು ರಾತ್ರಿ ವೇಳೆಯಲ್ಲಿ ಕಾಲೋನಿಗಳಿಗೆ ಹೋಗಿ ಅಲ್ಲಿನ ಜನರಿಗೆ ತಮ್ಮ ಧರ್ಮಬೋಧನೆ ಮಾಡಿ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಟಿವಿ ಚರ್ಚೆಯಲ್ಲಿ ಸಂಸದ ರಘು ರಾಮಕೃಷ್ಣ ರಾಜು ಅವರು ಹೇಳಿದರು.
ಕ್ರಿಶ್ಚಿಯನ್ ಧರ್ಮಗುರುಗಳು ವಿದೇಶಗಳಿಂದ ಬರುವ ಅಪಾರ ಹಣದಿಂದ ಜನರನ್ನು ಮತಾಂತರಗೊಳಿಸುತ್ತಿದ್ದಾರೆ. ಆದರೆ ಮತಾಂತರಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.
ಹಾಗಿದ್ದರೆ ಅಕ್ರಮ ಮತಾಂತರಗಳ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ, ಇದಕ್ಕೆ ನಮ್ಮ ಸರ್ಕಾರ ಏನು ಮಾಡಬೇಕು? ಬೇರೆ ಬೇರೆ ರಾಜ್ಯಗಳಲ್ಲೂ ಇದೇ ರೀತಿ ಮತಾಂತರಗಳು ನಡೆಯುತ್ತಿಲ್ಲವೆ ಎಂದು ಮರು ಪ್ರಶ್ನಿಸಿದರು.