ಪತ್ನಿಗೆ ಹಾವು ಕಚ್ಚಿಸಿ ಕೊಲೆಗೈದ ಪ್ರಕರಣ: ಆರೋಪಿ ಸಿಕ್ಕಿಬೀಳಲು ಆತನ ನಡೆಯೇ ಕಾರಣವಾಯ್ತು!

Kerala Snake Bite Death
Published on

ಕೊಲ್ಲಂ: ವಿಷಕಾರಿ ಹಾವಿನಿಂದ ಕಚ್ಚಿಸಿ ಪತ್ನಿಯನ್ನು ಕೊಲೆಗೈದ ಪ್ರಕರಣ ಕೇರಳದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆರಂಭದಲ್ಲಿ ಕೇವಲ ಹಾವು ಕಚ್ಚಿ ಸಾವಿಗೀಡಾಗಿದ್ದಾಳೆ ಎಂದು ನಂಬಲಾಗಿದ್ದ ಪ್ರಕರಣದಲ್ಲಿ ವಿಷಕಾರಿ ಮನಸ್ಥಿತಿಯುಳ್ಳ ಪತಿ ಸಿಕ್ಕಿ ಬೀಳಲು ಕಾರಣವಾದಂತಹ ಪ್ರಮುಖ ಸಂಶಯಗಳಿವು.

ಪತ್ನಿ ಸತ್ತರೂ ಬಾಡದ ಮುಖ

ಉತ್ತರಾ ಹಾವಿನ ಕಡಿತಕ್ಕೆ ಸತ್ತು ಬಿದ್ದಿದ್ದಾಗ ಆಕೆಯ ಸಹೋದರ ವಿಷ್ಣು ಹಾವಿಗಾಗಿ ಬೆಡ್​ರೂಮಿನಲ್ಲಿ ಹುಡುಕಾಡುವಾಗ ಆರೋಪಿ ಸೂರಜ್ ಮುಖದಲ್ಲಿ ದುಗುಡ ಇಲ್ಲದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಬೆಡ್​ನ ಕೆಳಗೆ ವಿಷ್ಣು ಹುಡುಕಾಡುವಾಗ ಹಾವು ಬೀರಿನ ಅಡಿಯಿಂದ ಹೊರೆಗೆ ಹೋಯಿತು ಎಂದಿದ್ದಾನೆ. ಬಳಿಕ ವಿಷ್ಣು ಅದನ್ನು ಅಲ್ಲಿಯೇ ಸಾಯಿಸಿದ್ದಾನೆ. ಇದಲ್ಲದೇ ವಿಷ್ಣುನೇ ಉತ್ತರಾಳನ್ನು ಕೊಲ್ಲಲು ಯತ್ನಿಸಿದ ಎಂತಲೂ ಸೂರಜ್​ ಆರೋಪಿಸಿದ್ದ.

ಸೂರಜ್​ಗೆ ಕಡಿಯದ ಹಾವು

ಮನೆಯ ಸಮೀಪದಲ್ಲಿ ಹಾವಿನ ಹುತ್ತ ಅಥವಾ ಖಾಲಿ ಜಾಗವೇನಾದರೂ ಇದಿದ್ದರೆ ಸಂಬಂಧಿಕರಿಗೆ ಸೂರಜ್​ ಮೇಲೆ ಅನುಮಾನ ಬರುತ್ತಿರಲಿಲ್ಲ. ಆದರೆ, ಕಿಟಕಿ ಸಮೀಪವೇ ಮಲಗಿದ್ದ ಸೂರಜ್​ಗೆ ಹಾವು ಕಡಿಯದೇ ಪತ್ನಿ ಉತ್ತರಾಗೆ ಕಚ್ಚಿತ್ತೆಂಬುದು ಅನುಮಾನಕ್ಕೆ ಕಾರಣವಾಗಿತ್ತು. ಇದಲ್ಲದೇ ಉತ್ತರಾ ತಾಯಿ ಕಿಟಕಿ ಮುಚ್ಚಿತ್ತು ಎಂದರೆ, ಸೂರಜ್​ ಕಿಟಕಿಯಿಂದಲೇ ಹಾವು ಬತ್ತೆಂದು ಹೇಳಿದ್ದಾನೆ.

ಸ್ನೇಹಿತರೊಟ್ಟಿಗೆ ಮಂದಹಾಸ ಬೀರಿದ್ದ ಸೂರಜ್​

ಉತ್ತರಾ ಸಾವಿನ ಬಳಿಕ ಸೂರಜ್​ನನ್ನು ನೋಡಲು​ ಸ್ನೇಹಿತರು ಮನೆಗೆ ಬಂದಿದ್ದರು. ಈ ವೇಳೆ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಕುಳಿತು ಸ್ನೇಹಿತರೊಂದಿಗೆ ಹರಟುತ್ತಾ ಸೂರಜ್​ ನಗು ಬೀರುತ್ತಿದ್ದುದ್ದನ್ನು ಸಂಬಂಧಿಕರು ಗಮನಿಸಿದ್ದಾರೆ. ಬಳಿಕ ಈ ಬಗ್ಗೆ ವಾಗ್ವಾದ ನಡೆದಿದ್ದರಿಂದ ಮಗ ಧ್ರುವನೊಂದಿಗೆ ಅಡೂರ್​ನಲ್ಲಿರುವ ತನ್ನ ಮನೆಗೆ ಬರಲು ಯತ್ನಿಸಿದ್ದಾನೆ. ಇದರ ನಡುವೆ ಸೂರಜ್​ ಉತ್ತರಾಳ ಚಿನ್ನಾಭರಣವನ್ನು ಲಾಕರ್​ನಿಂದ ತೆಗೆದುಕೊಂಡಿರುವುದು ಸಂಬಂಧಿಕರಿಗೆ ತಿಳಿದಿದೆ. ಪೊಲೀಸರು ಸಹ ಸೂರಜ್​ ಮನೆಯಲ್ಲಿ 12 ಸವರನ್​ ಚಿನ್ನವನ್ನು ಪತ್ತೆಹಚ್ಚಿದ್ದಾಗ, ಅದನ್ನು ಅವರಿಗೆ ಒಪ್ಪಿಸಲು ಸೂರಜ್​ ನಿರಾಕರಿಸಿದ್ದಾನೆ.

ಉತ್ತರಾಗೆ ಚಿಕಿತ್ಸೆ ಕೊಡಿಸಲು ವಿಳಂಬ

ಮಾರ್ಚ್​ ಒಂದರಂದು ಹಾವು ಸೂರಜ್​ ಮನೆಯಲ್ಲಿ ಪತ್ತೆಯಾಗಿದೆ. ಎರಡನೇ ಮಹಡಿಯಲ್ಲಿದ್ದ ತನ್ನ ಮೊಬೈಲ್​ ಫೋನ್​ ಅನ್ನು ತರಲು ಉತ್ತರಾಗೆ ಹೇಳಿದ್ದಾನೆ. ಈ ವೇಳೆ ಹಾವು ನೋಡಿ ಉತ್ತರಾ ಭಯಭೀತಳಾಗಿ ಬಂದು ಪತಿಗೆ ಹೇಳಿದ್ದಾಳೆ. ಬಳಿಕ ಸೂರಜ್​ ಹಾವನ್ನು ಹಿಡಿದು ಗೋಣಿ ಚೀಲದಲ್ಲಿ ಹಾಕಿಕೊಂಡು ದೂರಷ್ಟು ತೆಗೆದುಕೊಂಡು ಹೋಗಿದ್ದಾನೆ. ಉತ್ತರಾ ಈ ವಿಚಾರವನ್ನು ಪಾಲಕರಿಗೂ ತಿಳಿಸಿದ್ದಾಳೆ.

ಉತ್ತರಾಗೆ ಹಾವು ಕಡಿದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾರ್ಚ್​ 2 ರಂದು ಆಕೆಯ ಸಹೋದರನಿಗೆ ಸೂರಜ್​ ಮಾಹಿತಿ ನೀಡಿದ್ದಾನೆ. ಅಲ್ಲದೆ, ಆಕೆಯ ಪಾಲಕರಿಗೆ ತಿಳಿಸಿದಂತೆ ಹೇಳಿದ್ದಾನೆ. ಅಲ್ಲದೆ, ಹತ್ತಿರದಲ್ಲೇ ಅನೇಕ ಆಸ್ಪತ್ರೆಗಳಿದ್ದರು ಆಕೆಯನ್ನು ಬೇಗ ದಾಖಲಿಸಲು ವಿಳಂಬ ನೀತಿ ಅನುಸರಿಸಿದ್ದು ಸಹ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಎಲ್ಲ ಸಂಶಯಗಳಿಂದ ಸೂರಜ್​ ಮೇಲೆ ಪೊಲೀಸರ ಕಣ್ಣು ಬೀಳಲು ಕಾರಣವಾಗಿ ಕೊನೆಗೆ ಪ್ರಕರಣದ ಕರಾಳತೆಯೇ ಬಿಚ್ಚಿಕೊಂಡು ಪತಿ ಸೂರಜ್​ ಈಗ ಪೊಲೀಸರ ಅತಿಥಿಯಾಗಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net